Tapta Mudra Dharane by HH Swamiji at Bengaluru on 08-July-2014

ಚಾತುರ್ಮಾಸ್ಯ ನಿಮಿತ್ತ ಅಷಾಢ ಪ್ರಥಮ ಏಕಾದಶಿಯಂದು (08-July-2014) ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರ ನೇತೃತ್ವದಲ್ಲಿ ಬೆಂಗಳೂರಿನ ಜಯನಗರ 5 ನೇ ಬಡಾವಣೆಯ ಶಾಖಾ ಮಠದಲ್ಲಿ ಸುದರ್ಶನ ಹೋಮ ನಡೆಯಲಿದೆ.  ನಂತರ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶಿಷ್ಯರಿಗೆ ತಪ್ತಮುದ್ರಾಧಾರಣೆ ಮಾಡಲಿದ್ದಾರೆ.  ಮುದ್ರಾಧಾರಣೆಯು ಬೆಳಗ್ಗೆ 9 ಘಂಟೆಯಿಂದ ರಾತ್ರಿ 9 ಘಂಟೆಯವರೆಗೆ ನಡೆಯಲಿದೆ. 

ತಪ್ತಮುದ್ರಾಧಾರಣೆ:- ಒಂದು ಹಿನ್ನೆಲೆ.

ವೈಷ್ಣವರಿಗೆ ಆಷಾಡ ಶುಧ್ಧ ಏಕಾದಶಿ(ಪ್ರಥಮ ಏಕಾದಶಿ)ಯಂದು ನಡೆಯುವ ಮುದ್ರಾಧಾರಣೆ ಪರಮ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯ ದಕ್ಷಿಣಕ್ಕೆ ವಾಲುತ್ತಾನೆ. ಅಂದರೆ ಭಗವಂತ ಮಲಗಿದಾಗ ನಾವು ಮಲಗಿ ಆತನನ್ನು ಮರೆಯಬಾರದು. ಆತನ ಚಿನ್ಹೆಯಾದ ಶಂಖ ಮತ್ತು ಚಕ್ರಗಳು ಅಚ್ಚೊತ್ತಿರಬೇಕು ಎಂಬ ಭಾವನೆಯಿಂದಲೆ ಶಯನೈಕಾದಶಿಯಂದು ತಪ್ತಮುದ್ರಾಧಾರಣೆ ಸಂಸ್ಕಾರ ಬೆಳೆದು ಬಂದಿದೆ. ದೇಹ ಸಂಸ್ಕಾರ ನಾನಾ ಬಗೆ. ಜಾತಕರ್ಮ(ಜನನ), ಉಪನಯನ, ಸ್ನಾನಶೌಚಾದಿ, ಶುಚಿಭೋಜನಾದಿ, ಉಪವಾಸಾದಿ, ಸ್ವಯಂ ಶ್ರೀಹರಿಯ ಆಯುಧಗಳ ಮುದ್ರಾಧಾರಣ. ಇದರಿಂದ ಸಂಸ್ಕಾರಗೊಂಡ ದೇಹ ಅಂತಃಸತ್ವವೆಂಬ ಶುಧ್ಧಿ ಪಡೆದು ಸಾಧನಕ್ಕೆ ಹದಗೊಳ್ಳುತ್ತದೆ.

ತಪ್ತಮುದ್ರಾಧಾರಣೆ ಬಗ್ಗೆ ಸಣ್ಣ ಹಿನ್ನೆಲೆ - ಹಿಂದೊಮ್ಮೆ ಇಂದ್ರಾದಿ ದೆವತೆಗಳೆಲ್ಲ ವೃತ್ರಾಸುರನಿಂದ ಸೋತಾಗ ಮಹಾವಿಷ್ಣುವಿನ ಬಳಿ ಹೋಗಿ ಪ್ರಾರ್ಥಿಸಿದಾಗ "ಎಲೈ ದೇವತೆಗಳೆ, ನೀವೆಲ್ಲ ನನ್ನ ಶಂಖ ಚಕ್ರಾದಿ ಲಾಂಛನಗಳನ್ನು ಧರಿಸಿ ದೈತ್ಯರೊಡನೆ ಯುಧ್ಧ ಮಾಡಿ ನಿಮಗೆ ವಿಜಯ ಲಭಿಸುತ್ತದೆ" ಎಂದು ಶ್ರೀಹರಿಯು ಅಪ್ಪಣೆಯಿತ್ತನು. ಇಂದ್ರಾದಿಗಳು ಇದರಿಂದ ಕೃತಾರ್ಥರಾದರು. ಅಂದಿನಿಂದ ಕಾಮ, ಕ್ರೋಧದಂತಹ ವೈರಿಗಳ ಜಯಕ್ಕೆ ಮುದ್ರಾಧಾರಣೆ ಅಗತ್ಯ ಎಂಬ ನಿಯಮ ವೈಷ್ಣವರಿಗೆ ಶಾಶ್ವತವಾಯಿತು. ತಪ್ತಮುದ್ರಾಧಾರಣೆಯ ಮಹತ್ವವನ್ನು ಋಗ್, ಯಜುರ್, ಸಾಮ, ಅಥರ್ವ ವೇದಗಳಲ್ಲೂ, ಪದ್ಮ ಮೊದಲಾದ ಪುರಾಣಗಳಲ್ಲೂ, ಮಹಾಭಾರತಾದಿ ಇತಿಹಾಸದಲ್ಲೂ ವರ್ಣಿತವಾಗಿದೆ. ಶ್ರೀಮನ್ ಮಧ್ವಾಚಾರ್ಯರ ಸುದರ್ಶನದ್ವಯ (ತಪ್ತ ಮುದ್ರೆ ಮತ್ತು ಶಾಸ್ತ್ರ) ತಮ್ಮ ಶಿಷ್ಯರಿಗೆ ಅನುಗ್ರಹಿಸಿದ ವಿವರ ಸುಮದ್ವವಿಜಯದಲ್ಲಿ ಉಕ್ತವಾಗಿದೆ. ಅಂತೆಯೇ ಶ್ರೀವಾದಿರಾಜರ ಚಕ್ರಸ್ತುತಿ, ಶ್ರೀಕೃಷ್ಣಾಚಾರ್ಯರ ಸ್ಮೃತಿ ಮುಕ್ತಾವಳಿ ಹಾಗು ತಪ್ತ ಚಕ್ರ ಭೂಷಣಗಳಲ್ಲಿ ವಿವರವಾಗಿ ತಿಳಿಸಲಾಗಿದೆ.

ತಪ್ತಮುದ್ರಾಧಾರಣ ಮಾಡುವ ವಿಧಾನ - ಆಚಾರ್ಯ ಮಧ್ವರು ಹಾಕಿ ಕೊಟ್ಟ ಸತ್ಪರಂಪರೆಯಂತೆ, ಚಾತುರ್ಮಾಸ ಪ್ರಾರಂಭದ ಏಕಾದಶಿಯಂದು ಮಠದ ಪೀಠಾಧಿಪತಿಗಳಿಂದಲೇ ತಪ್ತಮುದ್ರಾಧಾರಣೆಯನ್ನು ಸ್ವೀಕರಿಸಬೇಕು. ಆಷಾಡ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಸುದರ್ಶನ ಹೋಮವನ್ನು ಆಚರಿಸಿ ಶಾಸ್ತ್ರೋಕ್ತ ಕ್ರಮದಲ್ಲಿ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳನ್ನು ಸ್ಮರಿಸಿ, ತಮೋರಜೋಗುಣಗಳು ನಾಶಪಡಿಸುವಂತೆ ಪ್ರಾರ್ಥಿಸಿ ಏಕಾಗ್ರಚಿತ್ತದಿಂದ ಗಂಡಸರು ಬಲಭುಜಕ್ಕೆ ಚಕ್ರ ಎಡಬುಜಕ್ಕೆ ಶಂಖ, ಮದುವೆಯಾದ ಹೆಂಗಸರು ಬಲಗೈಯಿಗೆ ಚಕ್ರ ಎಡಗೈಯಿಗೆ ಶಂಖ, ಮದುವೆಯಾಗದ ಹೆಂಗಸರು ಬಲಗೈಯಿಗೆ ಚಕ್ರ ಹಾಗು ಚಿಕ್ಕ ಮಕ್ಕಳಿಗೆ ಹೊಟ್ಟೆಯಮೇಲೆ ಚಕ್ರವನ್ನು ಮುದ್ರಿಸಬೇಕು.

ವೈಷ್ಣವತ್ವಕ್ಕೆ ದ್ಯೋತಕವಾದ ಅತ್ಯಂತ ಪ್ರಮುಖ ಬಾಹ್ಯಲಕ್ಷಣವೆಂಬುದು ತಪ್ತಮುದ್ರಾಧಾರಣದ ಹಿರಿಮೆ. ಇವರು ವೈಷ್ಣವರೆಂದು ಇತರರು ಗುರುತಿಸುವುದಕ್ಕಿಂತಲೂ ಮುಖ್ಯವಾಗಿ ತಾನು ವಿಷ್ಣು ಭಕ್ತನೆಂದು ಸ್ವಂತಕ್ಕೆ ಮರೆಯದಿರಲೆಂದು ಹುಟ್ಟಿಕೊಂಡ ಈ ಪರಂಪರೆ ನಿಜಕ್ಕೂ ಅರ್ಥಪೂರ್ಣ.

 

Image Source : Internet.