Rayara Prasada

ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠವು ಸಾರ್ವಜನಿಕ ಕ್ಷೇತ್ರದಲ್ಲಿ ತನ್ನನ್ನು ಹೆಚ್ಚಾಗಿ ತೊಡಗಿಸಿಕೊಂಡಿದೆ. ಮಂತ್ರಾಲಯದಲ್ಲಿ ಉಚಿತ ಆಸ್ಪತ್ರೆ (ಶ್ರೀ ಸುಜಯೀಂದ್ರ ಆರೋಗ್ಯ ಶಾಲಾ), ಸಾರ್ವಜನಿಕ ರಸ್ತೆ ನಿರ್ಮಾಣ, ಕುಡಿಯುವ ನೀರಿನ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ನಡೆಸುತ್ತಿರುವ ಬೆನ್ನಲ್ಲೇ ಮತ್ತೊಂದು ಮಹತ್ತರ ಯೋಜನೆ ಗರಿಗೆದರಿದೆ. ಅದು "ಶಾಲಾ ಮಕ್ಕಳಿಗೆ ಉಚಿತ ಬಿಸಿಯೂಟದ ವ್ಯವಸ್ಥೆ".

ಮಂತ್ರಾಲಯದಲ್ಲಿ ಯಾವತ್ತಿಗೂ ಅನ್ನಕ್ಕೆ ಕೊರತೆಯಿಲ್ಲ. ಶ್ರೀ ರಾಘವೇಂದ್ರ ಸ್ವಾಮಿಗಳು "ಶ್ರೀ ರಾಘವೇಂದ್ರ ಸಕಲಪ್ರದಾತಾ" ಎನ್ನುವ ಅಪ್ಪಣ್ಣಾಚಾರ್ಯರ ವಾಕ್ಯವನ್ನು ಅನುದಿನವೂ ನಡೆಸಿಕೊಡುತ್ತಿದ್ದಾರೆ. ನಿತ್ಯವೂ ಶ್ರೀ ಮಂತ್ರಾಲಯ ಮಠದಿಂದ ಉಚಿತ ಅನ್ನದಾನ ನಡೆದಿದೆ. ಇದರ ಮುಂದುವರೆದ ಭಾಗವೆಂಬಂತೆ ಶ್ರೀ ಮಠ ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸುತ್ತಮುತ್ತ ಹಳ್ಳಿಗಳ ಶಾಲಾ ಮಕ್ಕಳಿಗೆ ಉಚಿತ ಅನ್ನದಾನ ಮಾಡುವ ಯೋಜನೆಯನ್ನು ಜಾರಿಗೊಳಿಸುತ್ತಿದೆ. 

ಹೌದು ಬಹಳ ದಿನಗಳಿಂದ ಇಂಥದೊಂದು ಯೋಜನೆ ಮಂತ್ರಾಲಯ ಪೀಠಾಧಿಪತಿಗಳ ಬಯಕೆಯಾಗಿತ್ತು. ಈಗ ಆ ಯೋಜನೆ ಕಾರ್ಯಗತಗೊಳಿಸಲು ಶ್ರೀ೧೦೮ ಶ್ರೀ ಸುಯತೀಂದ್ರ ತೀರ್ಥರು ಹಾಗೂ ಇಲ್ಲಿನ ಅಧಿಕಾರಿಗಳು ಮುಂದಾಗಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾನ್ಹದ ಊಟ ಒದಗಿಸುವುದು ಈ ಯೋಜನೆಯ ಮುಖ್ಯ ಅಜೆಂಡಾ. ಪ್ರಾರಂಭಿಕ ಹಂತವಾಗಿ  ಮಂತ್ರಾಲಯದ ಸುತ್ತಮುತ್ತ ಇರುವ ಕರ್ನಾಟಕ ಹಾಗೂ ಅಂಧ್ರದ ೫೦ಹಳ್ಳಿಗಳ ಶಾಲೆಯ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ನಂತರ ಹಂತಹಂತವಾಗಿ ಈ ಯೋಜನೆಯನ್ನು ವಿಸ್ತರಿಸಲಾಗುವುದು.