Honour at Tirupati Tirumala Devasthanam to HH Sri Suyateendra Teertharu

HH Swamiji In frnt Of Garudagambha at Tirupati Prakara.

ಮಂತ್ರಾಲಯ ಶ್ರೀ ರಾಘವೇಂದ್ರ ಮಠಕ್ಕೂ ತಿರುಪತಿ ಶ್ರೀ ಶ್ರೀನಿವಾಸ ದೇವರಿಗೂ ಅವಿನಾಭಾವ ಸಂಬಂಧ. ಇದಕ್ಕೆ ಸಾಕ್ಷಿಯಾಗಿ ಪ್ರತಿ ವರ್ಷ ರಾಯರ ಆರಾಧನಾ ಸಮಯದಲ್ಲಿ ತಿರುಪತಿಯಿಂದ ಶ್ರೀ ಶ್ರೀನಿವಾಸ ದೇವರ ಶೇಷವಸ್ತ್ರ ಹಾಗೂ ಪ್ರಸಾದ ರಾಯರ ಮಠಕ್ಕೆ ಬರುತ್ತದೆ. ಅಲ್ಲದೆ ಪ್ರತಿವರ್ಷವೂ ತಿರುಪತಿ ದೇವಸ್ಥಾನದ ವತಿಯಿಂದ ಶ್ರೀ ಮಠಕ್ಕೆ ಗೌರವ ಸಮರ್ಪಣೆಯಾಗುತ್ತದೆ. ಅದರಂತೆ ಈ ವರ್ಷದ ಗೌರವ ಸಮರ್ಪಣೆಯು ಈ ೧೪ಡಿಸೆಂಬರ್ ರಂದುಸಲ್ಲಿಸಲಾಯಿತು. ದಕ್ಷಿಣಭಾರತ ಸಂಚಾರದಲ್ಲಿದ್ದ ಪರಮಪೂಜ್ಯ ಶ್ರೀ ಸುಯತೀಂದ್ರ ತೀರ್ಥರು ಶಿಷ್ಯರೊಡನೆ ತಿರುಪತಿಗೆ ತೆರಳಿ ಶ್ರೀ ಶ್ರೀನಿವಾಸದೇವರ ದರ್ಶನ ಪಡೆದರು. ಹಿಂದಿನ ರಾತ್ರಿ ತಿರುಮಲದಲ್ಲಿರುವ ಮಂತ್ರಾಲಯದ ಶಾಖಾಮಠದಲ್ಲಿ ತಂಗಿದ್ದ ಶ್ರೀಗಳು ಪ್ರಾತಃ ಕಾಲ ಸ್ನಾನಾಹ್ನೀಕಗಳನ್ನು ಮುಗಿಸಿಕೊಂಡು ಬೆಳಗ್ಗೆ ಸುಮಾರು ೭ಘಂಟೆಗೆ ತಿರುಮಲ ದೇವಸ್ಥಾನಕ್ಕೆ ತೆರಳಿದರು.

  ತಿರುಪತಿ ಶ್ರೀ ಶ್ರೀನಿವಾಸ ದೇವಸ್ಥಾನದ ಎದುರು ಭಾಗದಲ್ಲಿರುವ ಬೇಡಿ ಆಂಜನೇಯ ದೇವಸ್ಥಾನ ತಲುಪಿದೊಡನೆ ಶ್ರೀ ತಿರುಪತಿ ದೇವಸ್ಥಾನದ ಆಡಳಿತಾಧಿಕಾರಿಗಳು ವಾದ್ಯಗಳೊಂದಿಗೆ ಶ್ರೀಗಳನ್ನು ಸ್ವಾಗತಿಸಿದರು. ನೇರವಾಗಿ ಗರ್ಭಗುಡಿಗೆ ಶ್ರೀ ಗಳನ್ನು ಕರೆದುಕೊಂಡು ಹೋದ ಅಧಿಕಾರಿ ವರ್ಗ ಹಾಗೂ ಅಲ್ಲಿನ ಅರ್ಚಕ ವೃಂದ ಶ್ರೀಗಳನ್ನು ಶ್ರೀ ಶ್ರೀನಿವಾಸ ದೇವರ ಸಮೀಪಕ್ಕೆ ಕರೆದೊಯ್ದು ಮರ್ಯಾದೆಗಳನ್ನು ಸಲ್ಲಿಸಿದರು. ನಂತರ ಶ್ರೀ ಸುಯತೀಂದ್ರ ತೀರ್ಥರು ಶ್ರೀಮಠದಿಂದ ತರಲಾಗಿದ್ದ ಫಲ ಮುಂತಾದುವುಗಳನ್ನು ಶ್ರೀನಿವಾಸದೇವರಿಗೆ ಸಮರ್ಪಿಸಿ ಮಹಾಮಂಗಳಾರತಿ, ಚಾಮರಾದಿ ಸೇವೆಗಳನ್ನು ನೆರವೇರಿಸಿದರು. ಸುಮಾರು ೧ಘಂಟೆಗೂ ಹೆಚ್ಚುಕಾಲ ಶ್ರೀಗಳು ಭಗವಂತನಿಗೆ ಅತೀ ಸಮೀಪದಲ್ಲಿ ಕುಳಿತಿದ್ದರು. ಹೂವಿನೊಂದಿಗೆ ನಾರು ಸಹ ಸ್ವರ್ಗ ಸೇರಿತು ಎನ್ನುವ ಮಾತಿನಂತೆ ಮಂತ್ರಾಲಯ ಮಠಾಧೀಶರಾದ ಶ್ರೀ ಸುಯತೀಂದ್ರ ತೀರ್ಥರ ಜೊತೆಗೆ ಅವರ ಜೊತೆ ತೆರಳಿದ ಸುಮಾರು ಮುನ್ನೂರು ಜನರಿಗೆ ಭೂ ವೈಕುಂಠಪತಿಯಾದ ಶ್ರೀ ತಿರುಪತಿ ತಿಮ್ಮಪ್ಪನ ದರ್ಶನ ಅತೀ ಸಮೀಪದಿಂದ ಆಯಿತು. ನಂತರ ಟಿ.ಟಿ.ಡಿ. ದೇವಸ್ಥಾನದ ಆಡಳಿತಾಧಿಕಾರಿಗಳು ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ಶ್ರೀ ರಾಘವೇಂದ್ರ ಮಠದ ಪ್ರತಿನಿಧಿಗಳಾಗಿ ದರ್ಶನಕ್ಕೆ ತೆರಳಿದ್ದ ಶ್ರೀಶ್ರೀ೧೦೮ ಶ್ರೀ ಸುಯತೀಂದ್ರ ತೀರ್ಥಶ್ರೀಪಾದಂಗಳವರನ್ನು ಮಂತ್ರಾಲಯ ಶಾಖಾ ಮಠದವರೆಗೂ ಬಂದು ಬೀಳ್ಕೊಟ್ಟರು.ಮತ್ತು ಶ್ರೀ ಮಠಕ್ಕೆ ಬಂದು ಶ್ರೀಗಳ ಮೂಲರಾಮನ ಪೂಜೆಯನ್ನು ವೀಕ್ಷಿಸಿ ಶ್ರೀ ಮೂಲರಾಮನ ಅನುಗ್ರಹ ಹಾಗೂ ಶ್ರೀಗಳವರಿಂದ ಆಶೀರ್ವಾದ ಪೂರ್ವಕವಾಗಿ ಫಲ-ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಸಂಜೆ ತಿರುಚಾನೂರಿಗೆ ತೆರಳಿದ ಶ್ರೀ ಸುಯತೀಂದ್ರ ತೀರ್ಥರು ಪದ್ಮಾವತೀ ದೇವಿಯ ದರ್ಶನವನ್ನು ಪಡೆದು ತಿರುಪತಿಯಿಂದ ಹೊರಟರು. ಈ ಮಧ್ಯೆ ಶ್ರೀ ಮಂತ್ರಾಲಯ ಮಠದ ವತಿಯಿಂದ ತಿರುಮಲ ದೇವಸ್ಥಾನದ ಅರ್ಚಕರು ಹಾಗೂ ಪಂಡಿತರುಗಳಿಗೆ ರಾಯರ ಶೇಷವಸ್ತ್ರ,ಫಲ-ಮಂತ್ರಾಕ್ಷತೆ ಹಾಗೂ ಗೌರವ ಸಂಭಾವನೆಯನ್ನು ನೀಡಿ ಆದರಿಸಲಾಯಿತು.

 

Click here for Images of Honour at Tirupati