Significance of Ramanavami

 

ರಾಮಾಯರಾಮಭದ್ರಾಯರಾಮಚಂದ್ರಾಯವೇಧಸೆ| 
ರಘುನಾಥಾಯ ನಾಥಾಯ ಸೀತಾಯ ಪತಯೇನಮಃ||

ಚೈತ್ರಮಾಸ ಸಾಧನೆಗೆ ವಿಶೇಷವಾದ ಮಾಸ. ಪುಣ್ಯಪ್ರದವಾದ, ಸರ್ವಶ್ರೇಷವಾದ ಮತ್ತು ಮಂಗಳದಾಯಕವಾದ ರಾಮದೇವರ ಆರಾಧನೆ ಬಹಳ ವಿಶೇಷ. ಈ ಮಾಸದಲ್ಲಿ ಅಯೋಧ್ಯೆಯ ಹತ್ತಿರ ಇರುವ ಸರಯೂ ನದಿಯ ಮಧ್ಯದಲ್ಲಿ ರಾಮತೀರ್ಥವೆಂಬ ಹೆಸರಿನ ತೀರ್ಥವಿದೆ.  ಅದು ಮನುಷ್ಯಗೆ ಸುಲಭದಲ್ಲಿ ಲಭ್ಯವಾಗುವುದಿಲ್ಲ. ಪೃಥ್ವಿಯಲ್ಲಿ ಎಷ್ಟು ತೀರ್ಥಗಳಿವೆಯೋ ಎಲ್ಲ ತೀರ್ಥಗಳ ಅಭಿಮಾನಿ ದೇವತೆಗಳು ಪ್ರತಿವರ್ಷ ಚೈತ್ರಮಾಸ ಬಂದೊಡನೆಯೇ ಶ್ರೀರಾಮತೀರ್ಥದಲ್ಲಿ ಸ್ನಾನಾರ್ಥವಾಗಿ ಅಯೋಧ್ಯೆಗೆ ಬರುತ್ತಾರೆ. ಫಾಲ್ಗುಣ ಪೌರ್ಣಿಮೆಯಿಂದ ಚೈತ್ರ ಪೌರ್ಣಿಮೆಯವರೆಗೆ ಅಯೋಧ್ಯಾ ಪಟ್ಟಣದಲ್ಲೇ ಇದ್ದು ರಾಮತೀರ್ಥದಲ್ಲಿ ಸ್ನಾನ ಮಾಡಿ ತಮ್ಮಿಂದ ಘಟಿಸಿದ ಪಾಪಗಳನ್ನು ಪರಿಹರಿಸಿಕೊಂಡು ತಮ್ಮ ತಮ್ಮ ಸ್ಥಳಗಳಿಗೆ ಹೋಗುತ್ತಾರೆ. ಬ್ರಹ್ಮಾಂಡದಲ್ಲಿ ಅಯೋಧ್ಯೆಗೆ ಸದೃಶವಾದ ನಗರವಿಲ್ಲ.

ನಂದಕುಮಾರನಾದ  ಕೃಷ್ಣ  ಬೇರೆಯಲ್ಲ ದಶರಥನಂದನನಾದ ಶ್ರೀ ರಾಮ ಬೇರೆಯಲ್ಲ.ಈ ಮಾಸದಲ್ಲಿ ಅಯೋಧ್ಯಾಪತಿಯಾದ ಶ್ರೀ ರಾಮಚಂದ್ರನನ್ನು ವಿಧಿಪೂರ್ವಕ ಪೂಜಿಸಬೇಕು. ಸೂರ್ಯನು ಮೀನರಾಶಿಯಲ್ಲಿರುವಾಗ ಸೀತಾಪತಿ ಶ್ರೀ ರಾಮಚಂದ್ರನನ್ನು ಧ್ಯಾನಿಸುತ್ತಾ ಪ್ರಾತಃಸ್ನಾನವನ್ನು ಮಾಡಿ ನಂತರ ರಾಮನಾಮವನ್ನು ಜಪಿಸಬೇಕು. ಹೀಗೆ ಮಾಡದವನು ನರಕಭಾಗಿಯಾಗಬೇಕಾಗುವುದು .ಸೀತಾಪತಿ ಶ್ರೀರಾಮಚಂದ್ರನೇ ಈ ಮಾಸಕ್ಕೆ ಅಧಿಪತಿಯಾಗಿರುವನು.ಆದ್ದರಿಂದ ಸಕಲ ಕರ್ಮಗಳೂ ಶ್ರೀ ರಾಮಚಂದ್ರನನ್ನು ಉದ್ದೇಶಿಸಿಯೇ ಮಾಡಬೇಕು.

ಶ್ರೀ ರಾಮಚಂದ್ರನು ಬ್ರಹ್ಮಾದಿ ದೇವತೆಗಳಿಗೆ ಆಜ್ಞಾಪಿಸಿ ಭೂಮಿಗೆ ಇಳಿದು ಬಂದು ಅಲ್ಲಿ ಅಯೋಧ್ಯಾಪತಿಯಾದ ದಶರಥ ಮಹರಾಜನ ಪತ್ನಿಯಾದ ಕೌಸಲ್ಯದೇವಿಯಲ್ಲಿ ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ಹೊರಬಂದನು. ಈ ಪ್ರಕಾರ ನವಮಿಯ ,ಮಧ್ಯಾನದಲ್ಲಿ ದಶರಥನ ಅರಮನೆಯಲ್ಲಿ ಶ್ರೀ ರಾಮಚಂದ್ರನು ಪ್ರಾದುರ್ಭವಿಸಿದಾಗ ಜಗತ್ತಿನ ಸಮಸ್ತ ಜನರಿಗೆ ಪರಮಾನಂದವಾಯಿತು. ದೇವದುಂಧುಭಿಗಳು ಮೊಳಗಿದವು. ಮಂಗಳಕರವಾದ ಪುಷ್ಪ ವೃಷ್ಟಿಯಾಯಿತು. ರಾಜನ ಅರಮನೆಗೆ ಧಾವಿಸಿ ಅಲ್ಲಿದ್ದ ಶಿಶುವಿನ ಮುಖಕಮಲವನ್ನು ಕಂಡ ಜನರು ಪರಮಾನಂದಭರಿತರಾದರು. ಆಕಾಶದಲ್ಲಿ ಬ್ರಹ್ಮರುದ್ರೇಂದ್ರಾದಿ ದೇವತೆಗಳೆಲ್ಲರೂ ನಾನಾ ವಿಮಾನಗಳಲ್ಲಿ ಆರೂಢರಾಗಿ ಕೌಸಲ್ಯ ಸಂಜಾತನನ್ನು ಕಂಡು ಸುಖಿಸಿದರು. ಅಲ್ಲಿ ಸೇರಿದ ಮಾನವರು ದೇವತೆಗಳು ಶ್ರೀ ರಾಮಚಂದ್ರ ದೇವರ ಜನ್ಮೋತ್ಸವವನ್ನು ವೈಭವದಿಂದ ಆಚರಿಸಿದರು.

ಅನಂತರ ದೇವತೆಗಳು ರಘುಕುಲತಿಲಕನಾದ ಶ್ರೀರಾಮಚಂದ್ರ ದೇವನನ್ನು ಕುರಿತು ಯಾರ ನಿಮಿತ್ತದಿಂದ ಭೂಮಿಯಲ್ಲಿ ನಿನ್ನ ಅವತಾರವಾಗಿದೆಯೋ ಅಂಥ ಅಸುರರಾದ ರಾವಣ ಕುಂಭಕರ್ಣರಿಂದ ಉಂಟಾದ ಭಯವು ಇನ್ನಿಲ್ಲವಾಯಿತು ಎಂದು ಹೇಳಿದರು.ದುಷ್ಟ ಶಿಕ್ಷಣ ಶಿಷ್ಟ ಸಂರಕ್ಷಣಕ್ಕಾಗಿ ಸ್ವಾಮಿ ಅವತರಿಸಿದ ಈ ಕಾಲ ಅತ್ಯಂತ ಉತ್ತಮವಾದುದು. ಮಂಗಳಪ್ರದವಾದುದು.ಅತ್ಯಂತ ಶ್ರೇಷ್ಟವಾದುದು ಎಂದು ಪರಿಪರಿಯಿಂದ ಕೊಂಡಾಡುತ್ತಾರೆ. ಇವರು ಸ್ತುತಿಗಳಿಂದ ಪ್ರಸನ್ನನಾದ ಸ್ವಾಮಿಯು ಅನುಗ್ರಹಿಸಿ ಈ ರೀತಿ ಉಪದೇಶಿಸುತ್ತಾನೆ. ಚೈತ್ರ ಮಾಸವು ಮಾಘ ಕಾರ್ತಿಕ ಮಾಸಗಳಿಗಿಂತಲೂ ಶ್ರೇಷ್ಟವಾದುದು. ಈ ಮಾಸದಲ್ಲಿ ಮಾಡಿದ್ದು, ಕೊಟ್ಟದ್ದು ಹೋಮಿಸಿದ್ದು, ಸ್ನಾನ ಮಾಡಿದ್ದು, ಶಾಸ್ತ್ರ ವಿಚಾರ ಮಾಡಿದ್ದು ಎಲ್ಲವೂ ಕೋಟಿ ಪಟ್ಟು ಅಧಿಕವಾದ ಫಲಪ್ರದವಾಗುವವು. ಅದರಲ್ಲಿಯೂ ಇವೆಲ್ಲವನ್ನು ಅಯೋಧ್ಯಯಲ್ಲಿ ಮಾಡಿದರೆ ವಿಶೇಷವಾದ ಫಲಪ್ರಾಪ್ತಿಯಾಗುವುದು. ಅಶ್ವಮೇಧಯಾಗ ಮಾಡುವುದರಿಂದ ಯಾವ ಶ್ರೇಯಸ್ಸು ಉಂಟಾಗುವದೋ, ಗೋಮೇಧದಿಂದ ಯಾವ ಫಲವು ಬರುವುದೋ ಅದೆಲ್ಲವೂ ಚೈತ್ರಮಾಸದಲ್ಲಿ ಪ್ರಾತಃಸ್ನಾನ ಮಾಡುವ ಮಾತ್ರದಿಂದ ಪ್ರಾಪ್ತವಾಗುವುದು. ದೇವತೆಗಳೇ, ಸೂರ್ಯಗ್ರಹಣವಿದ್ದಾಗ ಕುರುಕ್ಷೇತ್ರದಲ್ಲಿದ್ದು ಸ್ನಾನ ದಾನಾದಿಗಳನ್ನು ಮಾಡುವುದರಿಂದ ಎಷ್ಟು ಪುಣ್ಯವು ಬರುವುದೋ ಅಷ್ಟು ಪುಣ್ಯವು ಅಯೋಧೆಯಲ್ಲಿದ್ದು ಚೈತ್ರಮಾಸದಲ್ಲಿ ಪ್ರಾತಃಸ್ನಾನ ಮಾಡುವ ಮಾತ್ರದಿಂದ ಪ್ರಾಪ್ತವಾಗುವುದು. ಲೋಕಕಂಟಕರಾದ ರಾವಣಾಸುರನನ್ನು ಸಂಹರಿಸಿ ಆ ಬ್ರಹ್ಮಹತ್ಯಾಪಾಪಶಾಂತಿಗೋಸ್ಕರ ಸರಯೂ ನದಿಯ ದಂಡೆಯಲ್ಲಿರುವ ಸ್ಥಳದಲ್ಲಿ ಉತ್ತಮವಾದ ಯಜ್ಞವೊಂದನ್ನು ಮಾಡಲಿರುವೆನು. ಯಾವ ಸ್ಥಳದಲ್ಲಿ ಯಜ್ಞದ ಸಮಾಪ್ತಿಯಾಗುವುದೋ ಆ ಸ್ಥಳದಲ್ಲಿ ಉಧ್ಭವಿಸಿದ ತೀರ್ಥವು ನನ್ನ ಹೆಸರಿನಿಂದ (ರಾಮತೀರ್ಥವೆಂದು) ಬಹು ಪ್ರಸಿದ್ಧವಾಗುವುದು.

ಅಯೋಧ್ಯಾ ಪಟ್ಟಣದ ಹತ್ತಿರವಿರುವ ಸರಯೂ ನದಿಯ ಮಧ್ಯದಲ್ಲಿರುವ ಆ ರಾಮತೀರ್ಥದಲ್ಲಿ ಯಾರು ಚೈತ್ರಸ್ನಾನವನ್ನು ಮಾಡುವರೋ ಆ ಮನುಷ್ಯರು ನಿಶ್ಚಿತವಾಗಿಯೂ ಮೋಕ್ಷಭಾಗಿಗಳಾಗುವರು. ಸವಾಸವ ಸಕಲ ದೇವತೆಗಳೇ ನೀವೆಲ್ಲರೂ ಚೈತ್ರಮಾಸವು ಬಂದಾಗ ನನ್ನ ಆಜ್ಞಾನುಸಾರ ಬಹಿರ್ಜಲದಲ್ಲಿ ಸನ್ನಿಹಿತರಾಗಿರಬೇಕು.ಈ ಪ್ರಕಾರ ಶ್ರೀಹರಿಯು ಇಂದ್ರಾದಿ  ಸಕಲ ದೇವತೆಗಳನ್ನು ಆಜ್ಞಾಪಿಸಿ ಆ ಎಲ್ಲ ದೇವತೆಗಳಿಂದ ನಮಸ್ಕೃತನಾದನು. ಈ ಮಾತುಗಳನ್ನು ಸ್ವತಹ ಸ್ವಾಮಿಯೇ ಉಪದೇಶಿಸಿರುವುದರಿಂದ ಚೈತ್ರಮಾಸದ ಮಹಿಮೆ ಏನೆಂದು ತಿಳಿಯುತ್ತದೆ. ಇಂಥಾ ಪುಣ್ಯಪ್ರದವಾದ ಕಾಲದಲ್ಲಿ ಪ್ರತಿಪದದಿಂದ ಆರಂಭವಾಗುವ ರಾಮೋತ್ಸವವು ಸಂಭ್ರಮದಿಂದ ಎಲ್ಲಕಡೆ ಆಚರಿಸಲ್ಪಡುತ್ತದೆ. ಶ್ರೀ ರಾಮನು ಅನುಗ್ರಹಕ್ಕಾಗಿ ಪ್ರತಿಯೊಬ್ಬರೂ ಪೂಜಿಸಿ, ಸ್ಮರಿಸಿ, ಪಾರಾಯಣ ಕೀರ್ತನಗಳಿಂದ ಅರ್ಚಿಸಿ ತಮಗೆ ತಿಳಿದಂತೆ ಅವನನ್ನು ಕೊಂಡಾಡುತ್ತಾರೆ.

ಎಣಿಸಲೇನ್ನಳವೆ ನಿನ್ನ ಮಹಿಮೆಗಳ ಗುಣಗಣನುತ ನಾಮ ಕೋದಂಡ ರಾಮಾ”- ಎಂದು ವಾದಿ ರಾಜರ ಮಾತು. ಅಂಥ ಜ್ಞಾನಿಶ್ರೇಷ್ಟರೇ ಹಾಗೆ ಕೊಂಡಾಡುವಾಗ ನಮ್ಮ ಗತಿ ಏನು? ಹಾಗಾಗಿ ಆದಷ್ಟು ತಿಳಿದವರಿಂದ ತಿಳಿದು ಸಾಂಪ್ರದಾಯಕವಾಗಿ ನಡೆದು ಬಂದ ಹಾದಿಯಲ್ಲಿ ಶ್ರೀರಾಮನನ್ನು ಅರ್ಚಿಸೋಣ

ನಮ್ಮ ಸ್ವಾಮಿ ಜಗತ್ಸ್ವಾಮಿ ಅವತಾರ ಮಾಡಿದ ಈ ಸಂಭ್ರಮದ ಆಚಾರಣೆಯಲ್ಲಿ ಎಲ್ಲರೂ ಸತ್ಕ್ರಿಯವಾಗಿ ಪಾಲ್ಗೋಳ್ಳಬೇಕು. ನಮ್ಮ ಮಕ್ಕಳ ಜನ್ಮದಿನಾನೆ ಹೇಗೇಗೋ ಆಚರಿಸಬೇಕೆಂದು ಅಪೇಕ್ಷೆ ಪಡೊ ನಾವು ನಮ್ಮಪ್ಪ ನಮಗಾಗಿ ನಮ್ಮ ರಕ್ಷಣೆಗಾಗಿ ಧರೆಗಿಳಿದು ಬಂದ ದಿನ ಸಂಭ್ರಮದಿಂದ ಆಚರಿಸದಿದ್ದಲ್ಲಿ ಸ್ವಾಮಿ ದ್ರೋಹವಾಗುತ್ತದೆ. ಸಜ್ಜನರೆಲ್ಲರೂ ಈ ಹಬ್ಬದಂದು ಪುಣ್ಯ ಕಾರ್ಯದಲ್ಲಿ ತೊಡಗಲು ಇದು ಸುಸಮಯ.

ಉಟ್ಟಪೀತಾಂಬರವುಉಡುಗಂಟೆಒಡ್ಯಾಣ|ತೊಟ್ಟಕೌಸ್ತುಭಹಾರಕರುಣವಿರಲು|
ಕೊಟ್ಟಭಾಷೆಗೆತಪ್ಪತನ್ನಭಕುತರಿಗೊಲಿದು|ಸೃಷ್ಟಿಯೊಳಗೆಣೆಗಾಣೆಕೌಸಲ್ಯರಾಮಾ||
ಜಯತು ಭಕ್ತೋದ್ಧಾರ ಅಸುರಕುಲ ಸಂಹಾರ | ಜಯತು ದಶರಥ ಬಾಲ ಜಾನಕೀಲೋಲ|”

ರಾಮನಾಮ ಪಾಯಸಕೆ ಕೃಷ್ಣ ನಾಮ ಸಕ್ಕರೆ ವಿಟ್ಠಲ ನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ ಎಂಬ ದಾಸರ ಉಕ್ತಿಯಂತೆ ಹಬ್ಬದಡುಗೆ ಮಾಡಿ ಭಗವಂತನಿಗೆ ಸಮರ್ಪಿಸಿ ಅವನ ಭಜಿಸುತ್ತಾ ಆನಂದದಿಂದ ರಾಮನವಮಿ ಆಚರಿಸೋಣ. ಕೆಲವು ವಿಷಯಗಳನ್ನು ಭವಿಷ್ಯೋತ್ತರ ಪುರಾಣದ ಅಯೋಧ್ಯಾಕಾಂಡದ ಚೈತ್ರಮಾಸ ಮಹಾತ್ಮೆಯಿಂದ ಸಂಗ್ರಹಿಸಿದೆ. ಶ್ರೀ ರಾಮನವಮಿ ದಿನದಂದು ಶ್ರೀರಾಮನನ್ನು ಷೋಡಶೋಪಚಾರಗಳಿಂದ ಪೂಜಿಸಬೇಕು.

ರಾಮಸ್ಯಜನನೀಚಾಸಿರಾಮಾತ್ಮಕಮಿದಂಜಗತ್|
ಅತಸ್ತ್ವಾಂ ಪೂಜಯಿಷ್ಯಮಿ ಲೋಕಮಾತರ್ನಮೋಸ್ತು ತೇ|

ಎಂಬ ಮಂತ್ರದಿಂದ ಕೌಸಲ್ಯಯನ್ನು ಪೊಜಿಸಬೇಕು. ನಂತರ ಓಂ ರ ನಮೋ ದಶರಥಾಯ ಎಂಬ ಮಂತ್ರದಿಂದ ದಶರಥನನ್ನು ಪೂಜಿಸಬೇಕು.

ಕೌಸಲ್ಯಗರ್ಭಸಂಭೂತಸದಾಸೌಮಿತ್ರಿವತ್ಸಲ|ಜಾನಕೀಸಹಿತೋರಾಮಗೃಹಾಣಾರ್ಘ್ಯಂನಮೋಸ್ತುತೇ|
ಕೌಸಲ್ಯನಂದನೋವೀರ ರಾವಣಾಸುರಮರ್ದನ ಸೀತಾಪತೇ ನಮಸ್ತುಭ್ಯಂ ಗೃಹಾಣಾರ್ಘ್ಯಂ ನಮೋಸ್ತು ತೇ| ಎಂಬ ಮಂತ್ರಗಳಿಂದ ಶ್ರೀರಾಮದೇವರಿಗೆ ಅರ್ಘ್ಯವನ್ನು ಫಲಪುಷ್ಪ ಜಲಪೂರ್ಣವಾದ ಶಂಖದಿಂದ ಕೊಡಬೇಕು.

.......................................................................................................................................................................................................................................................................

 

 

Posted in: