A glance at AcharyaMadhwa - Kannada

                          

ಅಭ್ರಮಂ ಭಂಗರಹಿತಂ ಅಜಡಂ ವಿಮಲಂ ಸದಾ|          
ಆನಂದತೀರ್ಥಂ ಅತುಲಂ ಭಜೇ ತಾಪತ್ರಯಾಪಹಂ||


ಹಿಂದಿನ ಯುಗದಲ್ಲಿ ತಮಗಾದ ಪರಾಜಯಕ್ಕೆ ಪ್ರತಿ ಅಪಕಾರವನ್ನು ಮಾಡಬಯಸಿ ಭೂಮಿಯಲ್ಲಿ ಹುಟ್ಟಿದ ಮಣಿಮಂತ ಮೊದಲಾದ ಅತಿ ದುರಾತ್ಮರು ರಚಿಸಿರುವ ಇಪ್ಪತ್ತೊಂದು ದುಷ್ಟ ಭಾಷ್ಯಗಳನ್ನು ಖಂಡಿಸಲೇ ಅವತರಿಸಿದ ಆನಂದ ತೀರ್ಥ ಮುನಿಗಳ ಚರಣಾರವಿಂದಗಳಿಗೆ ನಮಸ್ಕರಿಸುತ್ತ ಹರಿಕಥಮೃತಸಾರದ ಕರ್ತೃಗಳಾದ ಶ್ರೀ ಜಗನ್ನಾಥದಾಸರು ತಮ್ಮ ಮಂಗಳಾಚರಣದಲ್ಲಿ ಮತ್ತೊಂದು ಪದ್ಯದಿಂದ  ಆನಂದತೀರ್ಥರನ್ನು ಸ್ತುತಿಸಿದ್ದಾರೆ.
 ಪಂಚಭೇದಾತ್ಮಕ ಪ್ರಪಂಚಕೆ
ಪಂಚರೂಪಾತ್ಮ್ಮಕನೆ ದೈವಕ
ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ
ಪಂಚವಿಂಶತಿ ತತ್ವತರತಮ
ಪಂಚಿಕೆಗಳನು ಪೇಳ್ದ ಭಾವಿ ವಿ
ರಿಂಚಿಯೆನಿಪಾನಂದ ತೀರ್ಥರ ನೆನೆವೆನನುದಿನವು||

ಜಗತ್ತು ಸುಳ್ಳು: ದೇವರಿಗೆ ಜ್ಞಾನಾನಂದಾದಿ ಗುಣಗಳು ಇಲ್ಲ; ಜೀವರಿಂದ ಭೇದವಿಲ್ಲ. ಜೀವರಲ್ಲಿಯೂ ಪರಸ್ಪರ ಭೇದಗಳಿಲ್ಲವೆಂಬ ಅದ್ವೈತವಾದದಿಂದ ಹುಟ್ಟಿದ ಅಜ್ಞ್ನನವನ್ನು ಕಳೆಯಲು ಪಂಚಭೇದ ತಾರತಮ್ಯ ಸಮರ್ಥನೆಗೈಯುವ ಸಚ್ಚಾಸ್ತ್ರಗಳನ್ನು ಆಚಾರ್ಯರು ಉಪದೇಶಿಸಿದರು. 
ಪಂಚಭೇದಾತ್ಮಕ ಪ್ರಪಂಚಕೆ-ಜೀವೇಶ್ವರ ಭೇದ, ಜಡೇಶ್ವರ ಭೇದ,ಜಡ ಜೀವ ಭೇದ, ಜೀವ ಜೀವ ಭೇದ, ಜಡ ಜಡ ಭೇದ, ಇವು ಪ್ರಮಾಣಗಳಿಂದ ಪ್ರಮಿತವಾಗಿರುತ್ತದೆ. ಪಂಚರೂಪಾತ್ಮಕನೆ ದೈವಕ-ಅನಿರುದ್ಧ,ಪ್ರದ್ಯುಮ್ನ, ಸಂಕರ್ಣ, ವಾಸುದೇವ,ನಾರಾಯಣ ಇವು ೫ ರೂಪಗಳು. ರುದ್ರಾದಿ ದೇವತೆಗಳೂ ಜಗದ್ವ್ಯಾಪಕರೂ,ಜಗತ್ಪ್ರೇರಕರೂ ಆಗಿರುವಾಗ ನಾರಾಯಣನೇ ಪರದೇವ ಹೇಗೆ? ಎಂಬ ಅನುಮಾನ ಬಂದಾಗ ಪಂಚಮುಖ ಶಕ್ರಾದಿಗಳು ಕಿಂಕರರು, ಭೃತ್ಯರು ಎಂದು ತಿಳಿಸಿದ್ದಾರೆ.
ಅವ್ಯಕ್ತ ತತ್ವಾಭಿಮಾನಿಯಾದ ರಮಾದೇವಿಯು, ಹರಿಗಿಂತಲೂ ಅನಂತ ಗುಣದಿಂದ ಕಡಿಮೆ ಎನಿಸುವಳು. ತ್ತತ್ವಾಭಿಮನಿ ಚತುರ್ಮುಖ ಹಾಗೂ ವಿಜ್ಞಾನ ತತ್ವಾಭಿನಿ ವಾಯುಗಳು ರಮಾದೇವಿಯರಿಗಿಂತ ಕೋಟಿಗುಣದಿಂ ಕಡಿಮೆಯವರು. ವೇದಾಭಿಮನಿ ಸರಸ್ವತಿ ಭಾರತಿ ಇವರುಗಳು ತಮ್ಮ ಪತಿಗಳಿಗಿಂತ ಒಂದು ನೂರು ಗುಣ ಕಡಿಮೆ........ ಹೀಗೆ ಪಂಚವಿಂಶತಿ ತತ್ವಗಳ, ತದಭಿಮಾನಿಗಳ ತಾರತಮ್ಯಗಳನ್ನು ವಿಸ್ತಾರದಿಂದ ಪೇಳ್ದ ಭವಿಷ್ಯತ್ತಿ ಬ್ರಹ್ಮರಾದ ಆನಂದತೀರ್ಥರನ್ನು ನಿರಂತರದಲ್ಲಿ ಸ್ಮರಿಸುತ್ತೇನೆ ಎನ್ದು ದಾಸಾರ್ಯರು ತಿಳಿಸುತ್ತಾರೆ.
ತಾರತಮ್ಯ ಜ್ಞಾನವಿಲ್ಲದೆ ಮಾಡಿದ ಸಾಧನೆ ನಿರರ್ಥಕ. ಎಂದಿಗೂ ಮೋಕ್ಷಪ್ರದವಾಗುವುದಿಲ್ಲ. ಸಜ್ಜನರ ಸಾಧನೆ ಫಲಪ್ರದವಾಗಲೆಂದು ತಮ್ಮ ಉಪದೇಶಗಳಿಂದ ಮುಕ್ತಿಯೋಗ್ಯ ಜೀವಿಗಳಾಗಲೆಂದು ಬಹು ಕಾರುಣ್ಯದಿಂದ ಅನುಗ್ರಹಿಸಿದ ಆನಂದತೀರ್ಥರ ಪಾದಾರವಿಂದಗಳಿಗೆ ಭಕ್ತಿಪೂರ್ವಕ ನಮನಗಳು. ತ್ರೈಲೋಕ್ಯ ಗುರುಗಳ ವಿಚಾರ ಹೇಳುವಷ್ಟು ಜ್ಞಾನವಿಲ್ಲದ ಕಾರಣ ದಾಸಾರ್ಯರ ಉಕ್ತಿಯನ್ನೇ ಆಶ್ರಯಿಸಿ ನನ್ನ ಬಾಲಭಾಷೆಯಲ್ಲಿ ಬರೆದಿದ್ದೇನೆ.

ದಾಸಾರ್ಯರು ತಮ್ಮ ಇಡೀ ಹರಿಕಥಾಮೃತಸಾರ ಗ್ರಂಥವನ್ನು ಮಧ್ವ ಶಾಸ್ತ್ರವೆಂಬ ಸಮುದ್ರದಲ್ಲಿ ದೊರೆತ ಬ್ರಹ್ಮಾದಿಗಳೆಂಬ ರತ್ನಗಳನ್ನು, ದೇವತೆಗಳ ತರತಮ ಭಾವಲಕ್ಷಣವನ್ನು ಅವಲೋಕಿಸಿ ತೆಗೆದು ಹರಿಗುಣ ಗಾನ ಮಾಡುವ ಕನ್ನಡ ಸುಭಾಷೆಯೆಂಬ ದಾರದಲ್ಲಿ ಪೋಣಿಸಿ ನವರತ್ನ ಮಾಲಿಕೆಯನ್ನ ಮಧ್ವಾಂತರ್ಗತ ಶ್ರೀಹರಿಗೆ ಅರ್ಪಿಸಿದ್ದಾರೆ. ಮಧ್ವ ಶಾಸ್ತ್ರವನ್ನು ಸಮುದ್ರಕ್ಕೆ ಹೋಲಿಸಿ ಆಚಾರ್ಯರು ತಿಳಿಸಿದ ತಾರತಮ್ಯವನ್ನು ಹುಡುಕಿ ತೆಗೆದು ಪೋಣಿಸಿದ್ದಾರೆ ಎಂದಮೇಲೆ ಮಧ್ವರಾಯರ ಕಾರುಣ್ಯ ಭಕ್ತರ ಮೇಲೆ ಎಷ್ಟಿದೆ ಎಂಬುದು ಹೇಳಲು ಸಾಧ್ಯವಿಲ್ಲ. ಇಂತಹ ಗುರುಗಳನ್ನು ಪಡೆದ ನಾವೇ ಧನ್ಯರು
 
                                                      ಆಚಾರ್ಯಾ ಶ್ರೀಮದಾಚಾರ್ಯಾ ಸಂತು ಮೇ ಜನ್ಮ ಜನ್ಮನಿ||
                                       
Article By: Vani Vadiraj
Posted in: