Adhika Masa

 

ಹಿಂದೂ ಧರ್ಮದಲ್ಲಿ ದೇವತೆಗಳಿಗೆ ವಿಶೇಷ ಸ್ಥಾನವಿದ್ದು ಪ್ರತಿಯೊಂದರಲ್ಲೂ ದೇವರನ್ನು ಕಾಣುವ ಸಾತ್ವಿಕ ಗುಣವಿದೆ. ನಾವು ಆಚರಿಸುವ ಹಬ್ಬ ಹರಿದಿನಗಳಿಂದ ಹಿಡಿದು ಪ್ರತಿಯೊಂದರಲ್ಲೂ ಭಗವದ್ರೂಪವನ್ನು ಚಿಂತಿಸುವ ನಮಗೆ  ಪ್ರತಿ  ದಿನ,ಮಾಸಗಳೂ ಹೊರತಾಗಿಲ್ಲ. ೧೨ಮಾಸಕ್ಕೂ ಭಗವಂತ ಒಂದೊಂದು ರೂಪಗಳಿಂದ ನಿಯಾಮಕನಾಗಿದ್ದು  ಒಂದಕ್ಕಿಂತ ಒಂದು ಮಾಸಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ಮೂರು ವರ್ಷಕ್ಕೊಮ್ಮೆ ಬರುವ "ಅಧಿಕ ಮಾಸಕ್ಕೆ" ವಿಶೇಷ ಸ್ಥಾನ ನೀಡಲಾಗಿದೆ. ಅಧಿಕ ಮಾಸದಲ್ಲಿ ಯಾವುದೇ ಹಬ್ಬಗಳು ಬರುವುದಿಲ್ಲವಾದರೂ ದಾನ,ಕರ್ಮಾನುಷ್ಠಾನ ಸಾಧನೆಗೆ ಅಧಿಕಮಾಸದಲ್ಲಿ ವಿಶೇಷ ಫಲವಿದೆ. ಅದಕ್ಕಲ್ಲವೇ "ಅಧಿಕಸ್ಯ ಅಧಿಕಫಲಂ" ಎಂದು ಹೇಳಿರುವುದು. ಇಂತಹಾ ಅಧಿಕ ಮಾಸ ಏಕೆ ಮಾಡಬೇಕು, ಹಿನ್ನೆಲೆ ಏನು, ಏನು ಫಲ, ೩೩ಭಗವದ್ರೂಪಗಳು ಯಾವುವು, ೩೩ ದಾನ ಏಕೆ ಮಾಡಬೇಕು ಇತ್ಯಾದಿಗಳನ್ನು ತಿಳಿಸುವುದೇ ಈ ಲೇಖನದ ಉದ್ದೇಶ.
 
ಯಾವ ಚಾಂದ್ರಮಾಸದಲ್ಲಿ ಸೂರ್ಯ ಸಂಕ್ರಾಂತಿ ಇರುವುದಿಲ್ಲವೋ ಆ ಮಾಸವನ್ನು ಅಧಿಕ ಮಾಸವೆಂದು ಪರಿಗಣಿಸಲಾಗುವುದು. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುವುದು. ಪ್ರತೀ 33ನೇ ಚಾಂದ್ರಮಾಸವು ಅಧಿಕ ಮಾಸವಾಗಿರುತ್ತದೆ. ವಶಿಷ್ಟ ಸಿದ್ದಾಂತ ಪ್ರಕಾರ ಅಧಿಕ ಮಾಸವು 32 ತಿಂಗಳು 16 ದಿವಸಗಳು, 3 ಗಂಟೆ 12 ನಿಮಿಷಕ್ಕೆ ಬರುತ್ತದೆ. 
ಅಧಿಕಮಾಸವು ಸಹ ಖಗೋಳ ವಿಜ್ಞಾನ ಮತ್ತು ಗಣಿತ ಸೂತ್ರಗಳನ್ನು ಆಧರಿಸಿದ ಪರಸ್ಪರ ತುಲನೆಯ ಲೆಕ್ಕಾಚಾರವಾಗಿದೆ. ಭೂಮಿಯ ಮೇಲಿನ ಕಾಲಗಣನೆಯು ಋತುಗಳಿಗೆ ಬದ್ಧವಾಗಿರ ಬೇಕಾಗಿರುತ್ತದೆ. ಋತು ಆವರ್ತವು, ಭೂ ವಾರ್ಷಿಕ ಚಲನೆಗೆ ಪರ್ಯಾಯವಾಗಿ ಉಂಟಾಗುವ ಪ್ರಾಕೃತಿಕ ಪ್ರಕ್ರಿಯೆ. ಆದ್ದರಿಂದ ಸೌರಮಾನವು ಋತುಗಣನೆಯ ಅಳತೆಯಾಗಿದೆ. ಆದರೆ ಜಗತ್ತಿನಾದ್ಯಂತ ಪೂರ್ವ ಕಾಲದಿಂದಲೂ ಚಂದ್ರನು ಕಣ್ಣಿಗೆ ಕಾಣಿಸುವ ಹಂತಗಳನ್ನು ಆಧರಿಸಿ ಚಾಂದ್ರಮಾನ ಬಳಕೆಯಲ್ಲಿದೆ. ಹಾಗಾಗಿ ನಮ್ಮಲ್ಲಿ ಸೌರಮಾನ ಮತ್ತು ಚಾಂದ್ರಮಾನ ಎರಡೂ ಕಾಲಗಣನೆ ಬಳಕೆಯಲ್ಲಿದೆ. ಸೌರಮಾನ ಚಾಂದ್ರಮಾನಗಳೆರಡೂ ಋತುಗಳಿಗೆ ಬದ್ಧವಾಗಿರುವಂತೆ ಅವೆರಡನ್ನು ಸಮೀಕರಿಸಲಾಗಿದೆ.
 
ಭೂಮಿಯು ಸೂರ್ಯನ ಸುತ್ತ, ಒಂದು ಸುತ್ತು ಸುತ್ತಿ ಬರಲು (1 ಆವರ್ತ) 365, 2422 ದಿವಸಗಳು ಬೇಕು. ಇದು ಸೌರಮಾನದ ವಾರ್ಷಿಕ ಚಲನೆಯಾಗಿದೆ. 
 
ಚಂದ್ರನು ಭೂಮಿಯ ಸುತ್ತಲೂ ಒಂದು ಸುತ್ತು ಸುತ್ತಿ ಬರಲು 27.3 ದಿವಸಗಳು ಬೇಕು. ಇದು ಚಂದ್ರಮಾನದ ಮಾಸಿಕ ಚಲನೆಯಾಗಿದೆ. ಅಂದರೆ ಭೂಮಿ ಮತ್ತು ಚಂದ್ರರ 27.3 ದಿವಸಗಳ ಚಲನೆ ಅಂದರೆ ನಿಯಮದ ಪ್ರಕಾರ ಸೂರ್ಯನ ಸುತ್ತಲೂ 1/12 ಭಾಗವನ್ನು ಚಲಿಸಿರುತ್ತದೆ. ಚಂದ್ರನು ಹುಣ್ಣಿಮೆಯಿಂದ ಮುಂದಿನ ಹುಣ್ಣಿಮೆವರೆಗೆ ಚಲಿಸಲು 2.2 ಹೆಚ್ಚಿನ ದಿವಸಗಳನ್ನು ತೆಗೆದುಕೊಳ್ಳುತ್ತದೆ. ಇದು ಸೂರ್ಯನ ಸುತ್ತಲು ಚಲಿಸುವ ಭೂಮಿಯ ಪಥವು ಸಮನಾಗಿಲ್ಲವಾಗಿರುವುದರಿಂದ ವ್ಯತ್ಯಾಸವಾಗುತ್ತದೆ. ಚಂದ್ರನು ಭೂಮಿಯ ಸುತ್ತಲು ಚಲಿಸುತ್ತಿರುವಾಗ ಭೂಮಿಯೂ ಸಹಾ ಸೂರ್ಯನ ಸುತ್ತಲೂ ಚಲಿಸುತ್ತಿರುವುದರಿಂದ ಚಂದ್ರನು ಹುಣ್ಣಿಮೆಯಿಂದ ಮುಂದಿನ ಹುಣ್ಣಿಮೆಯವರೆಗೆ ಚಲಿಸಲು 29.531 ದಿವಸಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಚಾಂದ್ರಮಾನದ ವಾರ್ಷಿಕ ಚಲನೆ 29.531 x 12 = 354.372 ದಿವಸಗಳಾಗಿರುತ್ತದೆ.
 
ಸೌರಮಾನದ ವಾರ್ಷಿಕ ಚಲನೆ (1 ಆವರ್ತನ) = 365.2422
ಚಾಂದ್ರಮಾನದ ವಾರ್ಷಿಕ ಚಲನೆ (29.531 x 12) = 354.372
ಸೌರಮಾನ ಮತ್ತು ಚಾಂದ್ರಮಾನದ ವಾರ್ಷಿಕ ವ್ಯತ್ಯಾಸ: 10.8702 ದಿವಸಗಳು
 
ಈ ವ್ಯತ್ಯಾಸ 3 ವರ್ಷಗಳಲ್ಲಿ 32.6106 ದಿವಸಗಳಾಗುತ್ತದೆ. ಈ ವ್ಯತ್ಯಾಸ ಸರಿತೂಗಿಸಲು 3ನೇ ವರ್ಷದಲ್ಲಿ ಅಧಿಕ ಮಾಸ ಬರುತ್ತದೆ. ಆಂದರೆ ಪ್ರತೀ 33ನೇ ಚಾಂದ್ರಮಾಸವು ಅಧಿಕಮಾಸವಾಗಿರುತ್ತದೆ. ಹೀಗೆ 33ತಿಂಗಳಿಗೊಮ್ಮೆ ಒಂದು ಮಾಸವನ್ನು ಸೇರಿಸುವ ಪರಿಕಲ್ಪನೆಯೇ ಅಧಿಕ ಮಾಸ. ಈ ಹಿನ್ನೆಲೆಯಲ್ಲಿಯೇ ೩೩ ದಾನಗಳನ್ನು ಕೊಡುವ ಪದ್ಧತಿ  ಜಾರಿಯಲ್ಲಿರುವುದು. 
ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಅಧಿಕ ಮಾಸವು ಹುಣ್ಣಿಮೆಯ ನಂತರ ಶುದ್ಧ ಪ್ರತಿಪದದಿಂದ ಪ್ರಾರಂಭವಾಗಿ ಅಮಾವಾಸ್ಯೆಯ ತನಕ ಆಚರಿಸಲಾಗುತ್ತದೆ. ಆದರೆ ಉತ್ತರ ಭಾರತದ ಜನರಿಗೆ ವೈಶಾಖ ಬಹುಳ ಪ್ರತಿಪದದಿಂದ ಪ್ರಾರಂಭವಾಗಿ ಹುಣ್ಣಿಮೆಗೆ ಮುಗಿಯುತ್ತದೆ. 
 
 ಅಧಿಕ ಮಾಸ: ಭಗವಾನ್ ಶ್ರೀ ವೇದವ್ಯಾಸರು ೧೮ಪುರಾಣಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ೧೮ಉಪಪುರಾಣಗಳೆಂದು ಪ್ರಸಿದ್ಧವಾದ ಪ್ರಕೃತ ಈ ಅಧಿಕಮಾಸದ ಮಹತ್ವ ಮತ್ತು ಮೂವತ್ತ್ಮೂರು(೩೩) ಅಪೂಪದಾನಗಳ ವಿವರಣೆ ಮಹತ್ವ ಇವುಗಳಿಗೆ ಮೂಲ ಆಧಾರ "ಬೃಹನ್ನಾರದೀಯ ಪುರಾಣ ಗ್ರಂಥ". ನಾರದೀಯ ಪುರಾಣ ಮತ್ತು  ಪ್ರಧಾನ ಪುರಾಣ ಹಾಗೂ ಉಪಪುರಾಣಗಳಲ್ಲಿಯೂ ಬಂದಿರುತ್ತದೆ. ಆದಕಾರಣ ಇದು ಪ್ರಧಾನವಾದ ನಾರದ ಪುರಾಣಾಂತರ್ಗತ  ಎನ್ನುವುದನ್ನು ಪ್ರತ್ಯೇಕವಾಗಿ ಗುರುತಿಸುವುದರ ಸಲುವಾಗಿ  ಹಾಗೂ ಅಧಿಕ ಮಾಸ ಮಹಾತ್ಮೆಯು ಭಗವಾನ್ ಶ್ರೀಮನ್ನಾರಾಯಣ ಹಾಗೂ ನಾರದರ ಸಂವಾದ ರೂಪ ಅಧಿಕ ಮಾಸ  ಹಾಗೆಂದೇ "ಬೃಹನ್ನಾರದೀಯ ಪುರಾಣಾಂತರ್ಗತ ಅಧಿಕಮಾಸ ಮಹಾತ್ಮೆ" ಎಂದು ಪ್ರಸಿದ್ಧವಾಗಿದೆ. ಇದು ಸಾತ್ವಿಕ ಪುರಾಣಾಂತರ್ಗತವಾದದ್ದು. ಇದರ ವೈಶಿಷ್ಟ್ಯ ೩೧ಅಧ್ಯಾಯಗಳಲ್ಲಿ ೧೫೬೩ಶ್ಲೋಕಗಳಿಂದ ನಿರೂಪಿತವಾಗಿದೆ.  
 
 ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಾಂತಿಯಿರುವುದಿಲ್ಲ.
ಅಧಿಕ ಮಾಸಕ್ಕೆ "ಮಲಿಮ್ಲುಚ ಮಾಸ" ಅಸಂಕ್ರಾಂತ ಮಾಸ, ಪುರುಷೋತ್ತಮ ಮಾಸ ಎಂತಲೂ ಕರೆಯುತ್ತಾರೆ. ಸೂರ್ಯನು ಈ ಮಾಸದಲ್ಲಿ ಒಂದೇ ರಾಶಿಯಲ್ಲಿರುವುದರಿಂದ ಈ ಮಾಸಕ್ಕೆ ಅಸಂಕ್ರಾಂತ ಮಾಸವೆಂದೂ ಕರೆಯುತ್ತಾರೆ. ಕಾಲ ನಿರ್ಣಯ ಗ್ರಂಥದಲ್ಲಿ "ಚಾಂದ್ರಮಾಸೋಹ್ಯ ಸಂಕ್ರಾಂತೋ ಮಲಮಾಸ ಪ್ರಕೀರ್ತಿತಃ ಇತಿ ಮಲತ್ವಂಚ ಕಾಲಾಧಿಕ್ಯಾತ್|  ತದುಕ್ತಂ ಗೃಹ್ಯ ಪರಿಶಿಷ್ಟೋ-ಮಲಂವದಂತಿಕಾಲಸ್ಯ ಮಾಸಂ ಕಾಲವಿಧೋಽಧಿಕಂಮಿತಿ||" ಎಂದು ವಿವರಿಸಿದ್ದಾರೆ.  (ಅಧಿಕಮಾಸವಷ್ಟೇ ಅಲ್ಲ, ಚೈತ್ರ ಮಾಸದಿಂದ ಫಾಲ್ಗುಣದವರೆಗಿನ ೧೨ ಮಾಸಗಳ ಪೈಕಿ  ೯ಮಾಸಗಳಲ್ಲಿ ಅಂದರೆ ಚೈತ್ರದಿಂದ ಕಾರ್ತೀಕ ಮಾಸದ ವರೆಗೆ ಮತ್ತು ಕೊನೆಯ ಫಾಲ್ಗುಣ ಸಹಿತವಾದ ಮಾಸಗಳಲ್ಲಿ ಸೂರ್ಯನು ಒಂದೇ ರಾಶಿಯಲ್ಲಿ ಇರುತ್ತಾನೆ. ಹೀಗಾಗಿ ಈ ಮಾಸಗಳಲ್ಲಿ ಸಂಕ್ರಾಂತಿಯು ಇರುವುದಿಲ್ಲವಾದ್ದರಿಂದ ಇವುಗಳನ್ನೂ ಅಸಂಕ್ರಾಂತ ಮಾಸವೆಂದು ಕರೆಯುತ್ತಾರೆ). 
ಪ್ರತಿ ಮಾಸದ ಎರಡೂ ಏಕಾದಶಿಗಳಿಗೆ ಪ್ರತ್ಯೇಕ ಪ್ರತ್ಯೇಕವಾದ ಪುರಾಣೋಕ್ತ ಹೆಸರುಗಳಿವೆ. (ಉದಾ: ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಗೆ "ಕಾಮದಾ ಏಕಾದಶಿ" ಎಂದು ಹೆಸರಿದ್ದರೆ, ಕೃಷ್ಣ ಪಕ್ಷದ ಏಕಾದಶಿಯು "ವರೂಥಿನಿ ಏಕಾದಶಿ" ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಆದರೆ ಈ ಅಧಿಕ ಮಾಸ ಯಾವುದೇ ಮಾಸಕ್ಕೆ ಸಂಬಂಧ ಇದ್ದರೂ  ಆ ಅಧಿಕ ಮಾಸದಲ್ಲಿ ಬರುವ ಶುಕ್ಲ, ಕೃಷ್ಣ ಪಕ್ಷದ ಏಕಾದಶಿಗಳು "ಪದ್ಮಿನಿ, ಪರಮಾ ಏಕಾದಶಿಗಳೆಂದೇ ಪ್ರಸಿದ್ಧವಾಗಿವೆ. ಈ ಏಕಾದಶಿಗೆ ರಾಧಾಸಹಿತ ಪುರುಷೋತ್ತಮ ನಾಮಕ ಪರಮಾತ್ಮ ನಿಯಾಮಕನು. ಆದ್ದರಿಂದ ಅಧಿಕ ಮಾಸಕ್ಕೆ ಪುರುಷೋತ್ತಮ ಮಾಸವೆಂದೂ ಹೆಸರಿದೆ.
 
ಅಧಿಕಮಾಸದಲ್ಲಿ ೩೩ದೇವತೆಗಳ ವಿವರಣೆ:
ಅಷ್ಟ       (೮)  ವಸುಗಳು
ಏಕಾದಶ  (೧೧)ರುದ್ರರು
ದ್ವಾದಶ   (೧೨) ಆದಿತ್ಯರು.
             (೧) ಪ್ರಜಾಪತಿ
             (೧) ವಷಟ್ಕಾರ
ಒಟ್ಟು       ೩೩ ದೇವತೆಗಳು. 
 
ಅಧಿಕ ಮಾಸದಲ್ಲಿ ಅಪೂಪ (ಅತಿರಸ) ದಾನ:
ಅಧಿಕ ಮಾಸದಲ್ಲಿ ದಾನಕ್ಕೆ ಅದರಲ್ಲೂ ೩೩ಅಪೂಪ ದಾನಕ್ಕೆ ವಿಶೇಷ ಫಲವಿದೆ. ೩೩ದಂಪತಿಪೂಜೆ, ದೀಪದಾನಗಳು ವಿಹಿತವಾಗಿವೆ.ಅಪೂಪದಾನದಿಂದ ಪೃಥ್ವೀದಾನದ ಫಲವನ್ನು ಕೊಡುತ್ತದೆ.  
ಅಧಿಕಮಾಸದ ಪ್ರತಿದಿನವೂ ಅದಾಗದಿದ್ದರೆ ದ್ವಾದಶಿ, ಹುಣ್ಣಿಮೆ ಮತ್ತಿತರೇ ದಿನಗಳಲ್ಲಿಯಾದರೂ ಕಂಚಿನಪಾತ್ರೆಯಲ್ಲಿಟ್ಟು ಬೆಲ್ಲ ಮತ್ತು ತುಪ್ಪ ಸಹಿತವಾಗಿ ತಾಂಬೂಲ ದಕ್ಷಿಣೆಯೊಂದಿಗೆ ಶ್ರೇಷ್ಠ ಬ್ರಾಹ್ಮಣರಿಗೆ ದಾನ ಕೊಡಬೇಕು.  ಕೊಡುವಾಗ ಅಪೂಪದಲ್ಲಿರುವ ೩೩ಭಗವದ್ರೂಪಗಳನ್ನು ಚಿಂತಿಸಿ ದಾನ ಮಾಡಬೇಕು. ಹೀಗೆ ದಾನ ಮಾಡಿದರೆ  ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲದ ತನಕ ಸ್ವರ್ಗದಲ್ಲಿ ವಾಸಿಸುವ ಪುಣ್ಯವು ಲಭಿಸುತ್ತದೆ. 
 
ಅಪೂಪದಾನ ಪ್ರಮಾಣ ಶ್ಲೋಕ :
ತ್ರಯಸ್ತ್ರಿಂಶದ ಪೂಪಾನ್ನಂ ಕಾಂಸ್ಯಪಾತ್ರೇ ನಿಧಾಯ ಚ|
ಸಘೃತಂ ಹಿರಣ್ಯಂಚ ಬ್ರಾಹ್ಮಣಾಯ ನಿವೇದಯೇತ್||
 
 ಅಪೂಪ ದಾನ ಸಂಕಲ್ಪ
ಆಚಮ್ಯ, ಪ್ರಾಣಾನಾಯಮ್ಯ ..............ವಾಸರ,...ಯೋಗ,....ಕರಣ,..... ಶುಭತಿಥೌ,....ಸಂಕೀರ್ತ್ಯ, ಶ್ರೀ ರಾಘವೇಂದ್ರ ಗುರುವಂತರ್ಗತ ಅಷ್ಟವಸು, ಏಕಾದಶ ರುದ್ರ, ದ್ವಾದಶಾದಿತ್ಯ, ಪ್ರಜಾಪತಿ, ವಷಟ್ಕಾರಾಖ್ಯ ತ್ರಯಸ್ತ್ರಿಂಶತ್ ದೇವತಾಂತರ್ಗತ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ವಾದಿ ತ್ರಯಸ್ತ್ರಿಂಶನ್ನಾಮಧಾರಿ ಮಲಮಾಸದೇವತಾಭಿನ್ನ ಶ್ರೀ ಪುರುಷೋತ್ತಮ ಪ್ರೇರಣಯಾ, ಶ್ರೀ ಪುರುಷೋತ್ತಮ ಪ್ರೀತ್ಯರ್ಥಂ ಅಮುಖ ಗೋತ್ರಸ್ಯ ಅಮುಖ ಶರ್ಮಣಃ ಸಪತ್ನೀಕಸ್ಯ ಮಮ ನಿಖಿಲ ಪಾಪಕ್ಷಯ ಪೂರ್ವಕ ಭೂದಾನಫಲ ಪ್ರಾಪ್ತ್ಯರ್ಥಂ ಅಪೂಪ ಸಮಛ್ಛಿದ್ರ ಸಮ ಸಂಖ್ಯಾಕ ವರ್ಷಸಹಸ್ರಾವಧಿ ಸ್ವರ್ಲೋಕ ನಿವಾಸಾದಿ ಫಲ ಸಿದ್ಯರ್ಥಂ ತದಂಗತ್ವೇನ ಅಪೂಪಪೂಜಾಂ ಬ್ರಾಹ್ಮಣ ಪೂಜಾಂ ತ್ರಯಸ್ತ್ರಿಂಶದ ಅಪೂಪದಾನಮಹಂ ಕರಿಷ್ಯೇ|
 
ಎಂಬ ಸಂಕಲ್ಪಾನುಸಾರ ಕಂಚಿನ ಪಾತ್ರೆಯಲ್ಲಿ ತುಪ್ಪ ಬೆಲ್ಲದೊಂದಿಗೆ ೩೩ಅಪೂಪಗಳನ್ನು ತುಂಬಿ ದೇವರ ಎದುರಿನಲ್ಲಿ  ರಂಗೋಲಿ ಅರಿಶಿನ ಕುಂಕುಮಾದಿಗಳಿಂದ ಮಂಡಲಮಾಡಿ ಮಣೆಯನ್ನಿಟ್ಟು ಅದರ ಮೇಲೆ ಅಪೂಪ ತುಂಬಿದ ಪಾತ್ರೆಯನ್ನಿಟ್ಟು ೩೩ದೇವತೆಗಳನ್ನು ಆವಾಹನ ಮಾಡಿ ದಾನ ಮಾಡಬೇಕು. 
 
ಅಧಿಕ ಮಾಸದಲ್ಲಿ ದಾನಕಾಲದಲ್ಲಿ ೩೩ದೇವತೆಗಳನ್ನು ಮತ್ತು ಭಗವದ್ರೂಪಗಳನ್ನು ಆವಾಹನೆ ಮಾಡುವ ಕ್ರಮ
 
 1. ದ್ರೋಣ ನಾಮಕ ವಸುಂ ತದಂತರ್ಗತಂ ವಿಷ್ಣುಂ ಆವಾಹಯಾಮಿ
 2. ಧ್ರುವ ನಾಮಕ ವಸುಂ ತದಂತರ್ಗತಂ ಜಿಷ್ಣುಂ  ಆವಾಹಯಾಮಿ
 3. ದೋಷ ನಾಮಕ ವಸುಂ ತದಂತರ್ಗತಂ ಮಹಾವಿಷ್ಣುಂ ಆವಾಹಯಾಮಿ
 4. ಅರ್ಕ ನಾಮಕ ವಸುಂ ತದಂತರ್ಗತಂ ಹರಿಂ ಆವಾಹಯಾಮಿ
 5. ಅಗ್ನಿ ನಾಮಕ ವಸುಂ ತದಂತರ್ಗತಂ ಕೃಷ್ಣಂ ಆವಾಹಯಾಮಿ
 6. ದ್ಯುನಾಮಕ ವಸುಂ ತದಂತರ್ಗತಂ ಅಧೋಕ್ಷಜಂ ಆವಾಹಯಾಮಿ
 7. ಪ್ರಾಣ ನಾಮಕ ವಸುಂ ತದಂತರ್ಗತಂ ಕೇಶವಂ ಆವಾಹಯಾಮಿ
 8. ವಿಭಾವಸು ನಾಮಕ ವಸುಂ ತದಂತರ್ಗತಂ ಮಾಧವಂ ಆವಾಹಯಾಮಿ
 9. ಭೀಮನಾಮಕ ರುದ್ರಂ ತದಂತರ್ಗತಂ ರಾಮಂ ಆವಾಹಯಾಮಿ
 10. ರೈವತ ನಾಮಕ ರುದ್ರಂ ತದಂತರ್ಗತಂ ಅಚ್ಯುತಂ ಆವಾಹಯಾಮಿ
 11. ಓಜ ನಾಮಕ ರುದ್ರಂ ತದಂತರ್ಗತಂ ಪುರುಷೋತ್ತಮಂ ಆವಾಹಯಾಮಿ 
 12. ಅಜೈಕಪಾತ್ ನಾಮಕ ರುದ್ರಂ ತದಂತರ್ಗತಂ ಗೋವಿಂದಂ ಆವಾಹಯಾಮಿ
 13. ಮಹನ್ನಾಮಕಂ ರುದ್ರಂ ತದಂತರ್ಗತ ವಾಮನಂ ಆವಾಹಯಾಮಿ
 14. ಬಹುರೂಪ ನಾಮಕ ರುದ್ರಂ ತದಂತರ್ಗತಂ ಶ್ರೀಶಂ ಆವಾಹಯಾಮಿ
 15. ಭವ ನಾಮಕ ರುದ್ರಂ ತದಂತರ್ಗತಂ ಶ್ರೀಕಂಠಂ ಅವಾಹಯಾಮಿ
 16. ವಾಮದೇವ ನಾಮಕ ರುದ್ರಂ ತದಂತರ್ಗತಂ ವಿಶ್ವಸಾಕ್ಷಿಣಂ ಅವಾಹಯಾಮಿ
 17. ಉಗ್ರನಾಮಕ ರುದ್ರಂ ತದಂತರ್ಗತಂ ನಾರಾಯಣಂ ಅವಾಹಯಾಮಿ
 18. ವೃಷಾಕಪಿ ನಾಮಕ ರುದ್ರಂ ತದಂತರ್ಗತಂ ಮಧುರಿಪುಂ ಅವಾಹಯಾಮಿ
 19. ಅಹಿರ್ಬುಧ್ನ ನಾಮಕ ರುದ್ರಂ ತದಂತರ್ಗತಂ ಅನಿರುದ್ಧಂ ಅವಾಹಯಾಮಿ
 20. ವಿವಸ್ವನ್ ನಾಮಕ ಆದಿತ್ಯಂ ತದಂತರ್ಗತಂ ತ್ರಿವಿಕ್ರಮಂ ಅವಾಹಯಾಮಿ
 21. ಆರ್ಯನಾಮಕ ಆದಿತ್ಯಂ ತದಂತರ್ಗತಂ ವಾಸುದೇವಂ ಅವಾಹಯಾಮಿ
 22. ಪೂಷನಾಮಕ ಆದಿತ್ಯಂ ತದಂತರ್ಗತಂ ಜಗದ್ಯೋನಿಂ ಅವಾಹಯಾಮಿ
 23. ತ್ವಷ್ಟೃ ನಾಮಕ ಆದಿತ್ಯಂ ತದಂತರ್ಯಾಮಿಣಂ ಅನಂತಂ ಆವಾಹಯಾಮಿ 
 24. ಸವಿತೃ ನಾಮಕ ಆದಿತ್ಯಂ ತದಂತರ್ಯಾಮಿಣಂ ಶೇಷಶಯನಂ ಆವಾಹಯಾಮಿ
 25. ಭಗ ನಾಮಕ ಅದಿತ್ಯಂ ತದಂತರ್ಯಾಮಿಣಂ ಸಂಕರ್ಷಣಂ ಆವಾಹಯಾಮಿ
 26. ಧಾತ್ರ ನಾಮಕ ಆದಿತ್ಯಂ ತದಂತರ್ಗತಂ ಪ್ರದ್ಯುಮ್ನಂ ಆವಾಹಯಾಮಿ
 27. ಪರ್ಜನ್ಯ ನಾಮಕ ಆದಿತ್ಯಂ ತದಂತರ್ಗತ ದೈತ್ಯಾರಿಂ ಅವಾಹಯಾಮಿ
 28. ವರುಣ ನಾಮಕ ಆದಿತ್ಯಂ ತದಂರ್ತಗತಂ  ವಿಶ್ವತೋಮುಖಂ ಅವಾಹಯಾಮಿ
 29. ಮಿತ್ರನಾಮಕ ಆದಿತ್ಯಂ ತದಂತರ್ಗತಂ ಜನಾರ್ಧನಂ ಆವಾಹಯಾಮಿ
 30. ಶಕ್ರ ನಾಮಕ ಆದಿತ್ಯಂ ತದಂತರ್ಗತಂ ಧರಾವಾಸಂ ಅವಾಹಯಾಮಿ
 31. ಉರುಕ್ರಮ ನಾಮಕ ಆದಿತ್ಯಂ ತದಂತರ್ಗತಂ ದಾಮೋದರಂ ಆವಾಹಯಾಮಿ
 32. ವಷಟ್ಕಾರಂ ಅಪೂಪ ದೇವತಾಂತರ್ಗತಂ ಅಕ್ಷಾಧಾನಂ ಅವಾಹಯಾಮಿ
 33. ಪ್ರಜಾಪತಿಂ ಅಪೂಪ ದೇವತಾಂತರ್ಗತಂ  ಶ್ರೀಪತಿಂ ಆವಹಯಾಮಿ
 
ಈ ರೀತಿ 33 ಅಧಿಕ ಮಾಸದ ದೇವತೆಗಳಿರುವುದರಿಂದ ಅಧಿಕ ಮಾಸದಲ್ಲಿ ಪುಣ್ಯ ಸಂಪಾದನೆ ಅಧಿಕ. ಭಗವಂತನು ಈ ಮಾಸದಲ್ಲಿ ಪಾಪಗಳನ್ನು ತೊಲಗಿಸಲಿಕ್ಕೆ ಸಹಾಯ ಮಾಡುತ್ತಾನೆ. ಆದ್ದರಿಂದ ಈ ಮಾಸಕ್ಕೆ ಮಲ ಮಾಸವೆಂದು ಕರೆಯುತ್ತಾರೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಸಂಧ್ಯಾವಂದನೆ, ದೇವರ ಪೂಜೆ ದಾನ ಧರ್ಮಗಳು ಭಗವಂತನ ಪ್ರೀತಿಗಾಗಿ ಮಾಡಬೇಕು ಅಂತೆಯೇ  ಅಧಿಕ ಮಾಸ ಕರ್ತವ್ಯಗಳನ್ನು ಪರಿಪಾಲಿಸುವ ಹೆಣ್ಣುಮಕ್ಕಳಿಗೆ ಭಗವಂತನು ಸೌಭಾಗ್ಯವನ್ನು ಭಗವಂತನಲ್ಲಿ ಶ್ರದ್ದಾ ಭಕ್ತಿಯುಳ್ಳ ಗಂಡು ಸಂತಾನವನ್ನು ನೀಡುತ್ತಾನೆ. ಅಧಿಕ ಮಾಸ, ಸ್ನಾನಾದಿ ಕರ್ತವ್ಯಗಳನ್ನು ಮಾಡುವವರಿಗೆ ಗರ್ಭ ಸ್ರಾವ ಉಂಟಾಗುವುದಿಲ್ಲ. ನಾವು ಮಾಡುವ ಪೂಜೆ - ಪುನಸ್ಕಾರಗಳು ಅಧಿಕವಾಗುತ್ತದೆ. 
 
ಅಧಿಕ ಮಾಸದಲ್ಲಿ ಮಾಡಬೇಕಾದ ದಾನ ಕರ್ಮಗಳು
ಅಪೂಪದಾನ, ದೀಪದಾನ, ಭಗವಂತನ ಪ್ರೀತಿಗಾಗಿ ಅಖಂಡ ದೀಪ ಉರಿಸುವುದು, ಚಾತುರ್ಮಾಸ್ಯವಿದ್ದರೆ ಅಧಿಕ ಮಾಸದಲ್ಲಿ ಚಾತುರ್ಮಾಸ್ಯ ಆಚರಿಸುವುದು  ಇನ್ನೂ ವಿಶೇಷ , ನಿತ್ಯ ನದಿ ಸ್ನಾನ, ಏಕಾದಶಿ ಉಪವಾಸ, ಏಕಭುಕ್ತ ಭೋಜನ, ಧಾರಣೆ-ಪಾರಣೆ, ಬ್ರಾಹ್ಮಣ ಸುವಾಸಿನಿಯರಿಗೆ ತಾಂಬೂಲದಾನ, ಫಲದಾನ ಮುಂತಾದ ದಾನಗಳನ್ನು ಭಗವಂತನ ಪ್ರೀತ್ಯರ್ಥವಾಗಿ  ಈ ಮಲಮಾಸದಲ್ಲಿ ಮಾಡಿದರೆ ಪುರುಷೋತ್ತಮ ನಾಮಕ ಭಗವಂತ  ನಮ್ಮ ಮನಸ್ಸಿನ ಮಲಗಳನ್ನೆಲ್ಲ ತೊಳೆದು ನಮ್ಮನ್ನು ಉದ್ಧರಿಸುವುದರಲ್ಲಿ ಸಂಶಯವಿಲ್ಲ.
ಇಂತಹಾ ಯಾವ ಅಧಿಕ ಮಾಸದ ಪೂಜೆ ದಾನಾದಿಗಳನ್ನು ಮಾಡಲು ಎಲ್ಲರಿಗೂ ಅನುಕೂಲವಾಗಲೆಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು ಶ್ರೀ ಗಳವರ ಆದೇಶದೊಂದಿಗೆ ಅಪೂಪ ದಾನ ಗೋದಾನ, ದಂಪತಿ ಪೂಜೆಗಳನ್ನು ಮಾಡುವ, ಮಾಡಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ. ರಾಯರ ಮಠಾಧೀಶರಾದ ಶ್ರೀ ಶ್ರೀ ಸುಯತೀಂದ್ರ ತೀರ್ಥರ ೭ ನೇಚಾತುರ್ಮಾಸ್ಯ ದ ಅಂಗವಾಗಿ ಶ್ರೀ ಮಠದಲ್ಲಿ ನಿತ್ಯ ದಂಪತಿ ಪೂಜೆ, ಅಪೂಪದಾನ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತಿದ್ದು ಮಂತ್ರಾಲಯ ಮಠದ ಚಾತುರ್ಮಾಸ್ಯ ಸೇವಾ ಸಮಿತಿ ಕಾರ್ಯಾಲಯದಲ್ಲಿ ವಿವರಗಳು ಲಭ್ಯವಿದ್ದು ಭಕ್ತಾದಿಗಳು ಸಂಪರ್ಕಿಸಿ ಈ ಅವಕಾಶವದ ಸದುಪಯೋಗ ಪಡೆದುಕೊಳ್ಳಬಹುದು.
 
 
Click here to read this article in English.
 
 
Posted in: