ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಗುರುಪರಂಪರೆಯ ಸಂಕ್ಷೀಪ್ತ ಚರಿತ್ರೆ -೨

ಶ್ರೀಪದ್ಮನಾಭತೀರ್ಥರು

ವೇದಾಂತ ಸಾಮ್ರಾಜ್ಯದಲ್ಲಿ ಆಚಾರ್ಯರ ತರುವಾಯ ಪಟ್ಟಾಭಿಷಿಕ್ತರಾದ ಯತಿಗಳೆಂದರೆ ಶ್ರೀಪದ್ಮನಾಭತೀರ್ಥರು. ಆಚಾರ್ಯರ ತತ್ವಗಳನ್ನು ಕಾಯಾ ವಾಚಾ ಮನಸಾ ಒಪ್ಪಿದ ಶೋಭನಭಟ್ಟರು ಶ್ರೀಮದಾಚಾರ್ಯರಿಂದ ಸುಮಾರು ಶಾಲಿವಾಹನ ಶಕ ೧೧೮೫ನೇ ರುಧಿರೋದ್ಗಾರಿ ನಾಮ ಸಂವತ್ಸರದ ಶುಭದಿನದಂದು ತುರ್ಯಾಶ್ರಮವನ್ನು ಸ್ವೀಕರಿಸಿ, ಶ್ರೀಪದ್ಮನಾಭತೀರ್ಥರೆಂದು ನಾಮಕರಣ ಹೊಂದಿದರು. ಶೋಭನಭಟ್ಟರು ಗೋದಾದವರೀ ತೀರದ ರಾಜಮಹೇಂದ್ರಿ ಮಂಡಲದಲ್ಲಿ ರಾಜ್ಯವಾಳುತ್ತಿದ್ದ ಕಾಕತೀಯ ಹಗಪತಿದೇವನ ಆಸ್ಥಾನದಲ್ಲಿ  ಆಪ್ತಮಂತ್ರಿಗಳೂ, ಆಸ್ಥಾನ ವಿದ್ವಾಂಸರು ಆಗಿದ್ದರು.

ಶೋಭನಭಟ್ಟರು ಒಂದು ವಿದ್ವತ್ಸಭೆಯನ್ನು ಎರ್ಪಡಿಸಿದ್ದರು. ಅಲ್ಲಿ ಜಗತ್ತಿನ ಸರ್ವಶಾಸ್ತ್ರ ಪಂಡಿತರೆಲ್ಲರನ್ನು ಆಹ್ವಾನಿಸಿದ್ದರು. ಅಲ್ಲಿ ನೆರೆದ ವಿದ್ವಾಂಸರೆಲ್ಲರೂ ಒಂದಾಗಿ ಶ್ರೀಮದಾಚಾರ್ಯರನ್ನು ವಾದದಲ್ಲಿ ಸೋಲಿಸಲು ಹೆಣಗಾಡಿ ಕೊನೆಗೆ ಎಲ್ಲ ವಿದ್ವಾಂಸರೂ ಶ್ರೀಮದಾಚಾರ್ಯರೊಂದಿಗೆ ವಾದದಲ್ಲಿ ಪರಾಜಿತರಾದಾಗ ಅವರ ಶಿಷ್ಯತ್ವವನ್ನು ವಹಿಸಿದರು.

ಇವರು ರಚಿಸಿದ ಗ್ರಂಥಗಳು
೧. ಆನಂದಮಾಲಾ
೨. ಸನ್ನ್ಯಾಯರತ್ನಾವಳಿ
೩. ಸತ್ತರ್ಕದೀಪಾವಳಿ ಮುಂತಾದವು.

ಆಚಾರ್ಯರಿಂದ ಸಾಕ್ಷತ್ ವಿದ್ಯಾಸಂಪಾದನ ಮಾಡಿ ಪರವಾದಿ ಖಂಡನ, ಗ್ರಂಥಲೇಖನ, ವೈರಾಗ್ಯಭಾಗ್ಯಪ್ರಸಾರ, ತತ್ವಸಾರ, ವೇದವ್ಯಾಖ್ಯಾನ ಮುಂತಾದವುಗಳಿಂದ ಹೋದಲ್ಲೆಲ್ಲ ದ್ವೈತವಿಜಯದುಂದುಭಿಯನ್ನು ಮೊಳಗಿಸಿದರು.

ತಮಗೆ ಆಚಾರ್ಯರಿಂದ ಕೊಡಲ್ಪಟ್ಟ ಶ್ರೀಗೋಪೀನಾಥದೇವರ ವಿಗ್ರಹವನ್ನು ತಮ್ಮ ಶಿಷ್ಯರಾದ ಶ್ರೀಲಕ್ಷ್ಮೀಧರತೀರ್ಥರಿಗೆ ಕೊಟ್ಟರು. ಆ ಪರಂಪರೆ ಇಂದಿಗೂ ನೆಡೆದು ಬಂದು ಶ್ರೀಪಾದರಾಜರ ಮಠವೆಂದು ಪ್ರಖ್ಯಾತವಾಗಿದೆ. ಈಗಲೂ ಮುಳುಬಾಗಿಲಿನಲ್ಲಿದ್ದು ಶ್ರೀಪಾದರಾಜರು ಜಗತ್ತನ್ನು ಉದ್ದಾರ ಮಾಡುತ್ತಿದ್ದಾದೆ. ಶ್ರೀಪದ್ಮನಾಭತೀರ್ಥರು ಆಚಾರ್ಯರಿಂದ ತಮಗೆ ಬಂದ ಮಹಾಸಂಸ್ಥಾನದ ಪೀಠವನ್ನು ತಮ್ಮ ಜೊತೆಗಿದ್ದ ಶ್ರೀ ಮದಾಚಾರ್ಯರಿಂದಲೇ ತುರ್ಯಾಶ್ರಮವನ್ನು ಪಡೆದ ಶ್ರೀನರಹರಿತೀರ್ಥರಿಗೆ ಕೊಟ್ಟರು. ಇದು ಮಧ್ವಾಚಾರ್ಯರ ಮೂಲಮಠವೆಂದು ಮುಂದೆ ಸಾಗಿತು. ಶ್ರೀಪದ್ಮನಾಭತೀರ್ಥರು ಎಂಟು ವರ್ಷ ಕಾಲ ವೇದಾಂತಸಾಮ್ರಾಜ್ಯವನ್ನಾಳಿದರು. ಶಾಲಿವಾಹನ ಶಕೆ ೧೨೪೬ನೇ ರಕ್ತಾಕ್ಷಿ ನಾಮ ಸಂವತ್ಸರ ಕಾರ್ತೀಕ ಬಹುಳ ಚತುರ್ಧಶಿ ಶುಭದಿನದಂದು ಆಚಾರ್ಯರ ಅದೇಶದಂತೆ ಶ್ರೀಮೂಲರಾಮದೇವರನ್ನು ತಂದ ಶ್ರೀನರಹರಿತೀರ್ಥರಿಗೆ ವೇದಾಂತ ಸಾಮ್ರಾಜ್ಯವನ್ನು ಒಪ್ಪಿಸಿ ಅನೆಗುಂದಿಯ ಸಮೀಪದಲ್ಲಿರುವ ‘ನವವೃಂದಾವನ’ ನಡುಗಡ್ಡೆಯಲ್ಲಿ (ತುಂಗಭದ್ರಾನದಿಯಲ್ಲಿ) ಶ್ರೀಮನ್ನಾರಯಣ ಸ್ಮರಣಾನಿರತರಾದರು. ಇವರಿಂದಲೇ ವೃಂದವನಸ್ಥರಾಗುವ ರೂಢಿ ವಿಶ್ವದಲ್ಲಿ ಪ್ರಾರಂಭವಾಯಿತು. ಇದಕ್ಕೂ ಮೊದಲು ಅದ ಗುರುಗಳ ವೃಂದಾವನಗಳು ಎಲ್ಲೂ ಸಿಕ್ಕುವುದಿಲ್ಲ.

ಪೂರ್ಣಪ್ರಜ್ಞಕೃತಂ ಭಾಷ್ಯಮಾದೌ ತದ್ಭಾವಪೂರ್ವಕಮ್|
ಯೋ ವ್ಯಾಕರೋನ್ನಮಸ್ತಸ್ಮೈ ಪದ್ಮನಾಭಾಖ್ಯಯೋಗಿನೇ||

Posted in: