ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಗುರುಪರಂಪರೆಯ ಸಂಕ್ಷೀಪ್ತ ಚರಿತ್ರೆ - ೧

ಶ್ರೀಹಂಸನಾಮಕ ಪರಮಾತ್ಮನಿಂದ ನಡೆದು ಬಂದ ಭಾಗವತೋತ್ತಮರ ವಂಶವೃಕ್ಷ

೧. ಶ್ರೀ ಹಂಸನಾಮಕ ಪರಮಾತ್ಮ
೨. ಶ್ರೀ ಬ್ರಹ್ಮದೇವರು
೩. ಶ್ರೀ ಸನಕ ತೀರ್ಥರು
೪. ಶ್ರೀ ಸನಂದನ ತೀರ್ಥರು
೫. ಶ್ರೀ ಸನತ್ಕುಮಾರತೀರ್ಥರು
೬. ಶ್ರೀ ಸನಾತನ ತೀರ್ಥರು
೭. ಶ್ರೀ ದೂರ್ವಾಸ ತೀರ್ಥರು
೮. ಶ್ರೀ ಜ್ಞಾನನಿಧಿ ತೀರ್ಥರು
೯. ಶ್ರೀ ಗರಡವಾಹನ ತೀರ್ಥರು
೧೦.ಶ್ರೀ ಕೈವಲ್ಯ ತೀರ್ಥರು
೧೧.ಶ್ರೀ ಜ್ಞಾನೇಶ ತೀರ್ಥರು
೧೨.ಶ್ರೀ ಪರತೀರ್ಥರು
೧೩.ಶ್ರೀ ಸತ್ಯಪ್ರಜ್ಞ ತೀರ್ಥರು
೧೪.ಶ್ರೀ ಪಾಜ್ಞ ತೀರ್ಥರು.
೧೫.ಶ್ರೀ ಅಚ್ಯುತಪ್ರೇಕ್ಷಾಚಾರ್ಯರು.

ಶ್ರೀಮಧ್ವಾಚಾರ್ಯರಿಂದಲೇ ಭಾಗವತ ಧರ್ಮವು ಮಧ್ವಮತವೆಂದು ಪ್ರಸಿದ್ಧಿ ಹೊಂದಿದೆ.

ಶ್ರೀಪರಶುರಾಮದೇವರು ನಿರ್ಮಿಸಿದ ಸಪ್ತ ಕ್ಷೇತ್ರಗಳಲ್ಲಿ ಒಂದಾದ ರಜತಪೀಠಪುರದಲ್ಲಿ(ಉಡುಪಿ) ತಂದೆ-ತಾಯಿಗಳ ಹನ್ನೆರಡು ವರ್ಷಗಳ ತಪಸ್ಸಿನ ಫಲವಾಗಿ ಜನ್ಮತಳೆದ ಶ್ರೀವಾಸುದೇವಾಚಾರ್ಯರು ಶ್ರೀಅಚ್ಯುತಪ್ರೇಕ್ಷರಿಂದ ಸಂನ್ಯಾಸ ಸ್ವೀಕರಿಸಿ, ಶ್ರೀಪೂರ್ಣಬೋಧರಾಗಿ ಮುಂದೆ ವೇದಾಂತ ವಿದ್ಯಾಸಿಂಹಾಸನದಲ್ಲಿ ಪಟ್ಟಾಭಿಷಿಕ್ತರಾಗಿ, ಶ್ರೀಆನಂದತೀರ್ಥರೆಂದು ನಾಮಕರಣವನ್ನು ಹೊಂದಿದರು. ಬದರಿಕಾಶ್ರಮದಲ್ಲಿ ಶ್ರೀವೇದವ್ಯಾಸರಿಂದ ಉಪದೇಶವನ್ನು ಹಾಗೂ ಅವರ ಪರಮಾನುಗ್ರಹವನ್ನು ಹೊಂದಿದರು. ಸಕಲ ಸಜ್ಜನರಿಗೆ ಮಹದಾನಂದವನು ದಯಪಾಲಿಸಿದರು. ಅಂಥ ಆಚಾರ್ಯರ ಶಿಷ್ಯಪರಂಪರೆಯಲ್ಲಿ ಇರುವ ಭಾಗ್ಯ ನಮಗೆ ದೊದೆತಿದೆ. ಅವರ ಉಪದೇಶದಂತೆ ಜೀವಿಸಿ ನಮ್ಮ ಜನ್ಮವನ್ನು ಸಾರ್ಥಕವನ್ನಾಗಿಯೂ, ಪಾವನವನ್ನಾಗಿಯೂ ಮಾಡಿಕೊಳ್ಳೋಣ.

ಪ್ರಥಮೋ ಹನುಮನ್ಮಾಮದ್ವಿತೀಯೋ ಭೀಮ ಎವ ಚ|
ಪೂರ್ಣಪ್ರಜ್ಞಃ ತೃತೀಯಸ್ತು ಭಗವತ್ಕಾರ್ಯಸಾಧಕಃ||

ವಾಯೋ ರಾಮವಚೋನಯಂ ಪ್ರಥಮಕಂ ಪಕ್ಷೋ ದ್ವಿತೀಯಂ ವಪುಃ|
ಮಧ್ವೋ ಯತ್ತು ತೃತೀಯಮೇತದಮುನಾ ಗ್ರಂಥಃ ಕೃತಃ ಕೇಶವೇ||

ಭಗವಂತನ ಆಜ್ಞೆಯಂತೆ ಅನ್ಯರಿಂದ ಅಸಾಧ್ಯವಾದ ಕಾರ್ಯವನ್ನು ಸಾಧಿಸಲು ವಾಯುದೇವರು ಉಡುಪಿ ಕ್ಷೇತ್ರದ ಬಳಿಯ ಪಾಜಕ ಮಧ್ಯಗೇಹಭಟ್ಟರು ಮತ್ತು ವೇದವತೀ ಎಂಬ ದಂಪತಿಗಳ ಹನ್ನೆರಡು ವರುಷಗಳ ತಪಸ್ಸಿನ ಫಲವಾಗಿ ವಿಳಂಬ ಸಂವತ್ಸರದ ಆಶ್ವಯುಜ ಶುದ್ಧ ದಶಮಿ, ಆದಿತ್ಯವಾರ ಶುಭ ಮುಹೂರ್ತದಲ್ಲಿ ಅವತರಿಸಿದರು. ಭಟ್ಟರು ಕೂಸಿಗೆ ವಾಸುದೇವನೆಂದು ನಾಮಕರಣ ಮಾಡಿದರು.

ಚಿಕ್ಕಂದಿನಲ್ಲಿಯೇ ಚೆಂಡಾಡುತ್ತಿರುವಾಗ ಕಂದುಕಸ್ತುತಿ ಎಂಬ ಸ್ತೋತ್ರವು ವಾಸುದೇವ ನಿಂದ ವಿರಚಿಸಲ್ಪಟ್ಟಿತು. ಮುಂದೆ ದುರ್ಗೆಯ ಬೆಟ್ಟದಲ್ಲಿ ಬಾಲಕನ ಉಪನಯನವಾಯಿತು. ನಿಮಿತ್ತ ಮಾತ್ರ ಉಪದೇಶವನ್ನು ಹೊಂದಿ, ಬ್ರಹ್ಮ ವಿದ್ಯೆ ಕಲಿಯಲು ಆರಂಭಿಸಿದ ಸ್ವಲ್ಪಕಾಲದಲ್ಲಿಯೇ ಬ್ರಹ್ಮವಿದ್ಯೆಯಲ್ಲಿ ನಿಷ್ಣಾತನಾಗಿ ವಾಸುದೇವನು ಭರತಖಂಡದಲ್ಲಿ ಪ್ರಖ್ಯಾತನಾದನು. ಮುಂದೆ ಶ್ರೀಹಂಸನಾಮಕ ಪರಮಾತ್ಮನಿಂದ ಪರಂಪರವಾಗಿ ಬಂದಿರುವ ಭಾಗವತೋತ್ತಮರ ಪೀಳಿಗೆಯಲ್ಲಿಯ ಶ್ರೀ ಅಚ್ಯುತಪ್ರೇಕ್ಷಾಚರ್ಯರಿಂದ ಸೌಮ್ಯ ಸಂವತ್ಸರದ ಆಷಾಢ ಕೃಷ್ಣ ಪಂಚಮೀ ದಿವಸ ಬ್ರಹ್ಮಚರ್ಯೆಯಲ್ಲಿ ಇರುವಾಗಲೇ ಸಂನ್ಯಾಸ ಆಶ್ರಮವನ್ನು ಸ್ವೀಕರಿಸಿದರು.

ಶ್ರೀಆಚಾರ್ಯ ರಚಿಸಿದ ಗ್ರಂಥಗಳು

೧. ಗೀತಾಭಾಷ್ಯ       
೨. ಗೀತಾತಾತ್ಪರ್ಯ           
೩. ಸೂತ್ರಭಾಷ್ಯ
೪. ಅಣುಭಾಷ್ಯ        
೫. ಅನುವ್ಯಾಖ್ಯಾನ            
೬. ನ್ಯಾಯವಿವರಣ
೭. ನಖಸ್ತುತಿ           
೮. ಯಮಕಭಾರತ             
೯. ದ್ವಾದಶಸ್ತೋತ್ರ
೧೦.ಕೃಷ್ಣಾಮೃತ ಮಹಾರ್ಣವ    
೧೧.ತಂತ್ರಸಾರ    
೧೨. ಸದಾಚಾರಸ್ಮೃತಿ
೧೩.ಋಗ್ಭಾಷ್ಯ      
೧೪.ಜಯಂತೀ ನಿರ್ಣಯ   
೧೫. ಭಾಗವತತಾತ್ಪರ್ಯ
೧೬.ಮಹಾಭಾರತತಾತ್ಪರ್ಯನಿರ್ಣಯ   
೧೭.ಸಂಹಿತಾ ಭಾಷ್ಯ   
೧೮.ಪ್ರಮಾಣ ಲಕ್ಷಣ
೧೯.ಕಥಾಲಕ್ಷಣ    
೨೦.ಮಾಯಾವಾದ ಖಂಡನ   
೨೧.ಉಪಾಧಿ ಖಂಡನ
೨೨.ಪ್ರಪಂಚ ಮಿಥ್ಯತ್ವಾನುಮಾನಖಂಡನ        
೨೩.ತತ್ವಸಂಖ್ಯಾನ
೨೪.ತತ್ವವಿವೇಕ     
೨೫.ತತ್ವೋದ್ಯೋತ       
೨೬.ಕರ್ಮನಿರ್ಣಯ
೨೭.ವಿಷ್ಣುನಿರ್ಣಯ    
೨೮.ಐತರೇಯ ಭಾಷ್ಯ   
೨೯.ತೈತ್ತಿರೀಯಭಾಷ್ಯ
೩೦.ಬೃಹದಾರಣ್ಯಕಭಾಷ್ಯ    
೩೧.ಕಾಠಕಭಾಷ್ಯ  
೩೨.ಈಶಾವಾಸ್ಯಭಾಷ್ಯ
೩೩.ಛಾಂದೋಗ್ಯಭಾಷ್ಯ    
೩೪.ಆಥರ್ವಣ ಭಾಷ್ಯ   
೩೫.ಮಾಂಡೂಕ್ಯಭಾಷ್ಯ
೩೬.ಷಟ್ಪ್ರಶ್ನ ಭಾಷ್ಯ       
೩೭.ತಲವಕಾರ ಭಾಷ್ಯ.

    ಹೀಗೆ ೩೭ ಗ್ರಂಥಗಳನ್ನು ರಚಿಸಿದ್ದಾರೆ. ಈ ಗ್ರಂಥಗಳು ಸರ್ವಮೂಲ ಗ್ರಂಥಗಳೆಂದು ಪ್ರಸಿದ್ಧವಾಗಿ ಮಾನ್ಯವಾಗಿವೆ. ಇಪ್ಪತ್ತೊಂದು ಕುಭಾಷ್ಯಗಳನ್ನು ಖಂಡಿಸಿ ಆಚಾರ್ಯರು ಸಚ್ಛಾಸ್ತ್ರದ ಪುನರುಜ್ಜೀವನವನ್ನು ಮಾಡಿದರು. ದೇಶಸಂಚಾರ ಮಾಡುತ್ತಾ ಪರವಾದಿಗಳನ್ನು ಗೆದ್ದು  "ದ್ವೈತ"ಮತವನ್ನು  ಎಲ್ಲೆಡೆ ಹಬ್ಬಿಸಿದರು. ಆಸೇತು ಹಿಮಾಚಲದಲ್ಲಿಯೂ ಕೀರ್ತಿಯು ಕಂಗೊಳಿಸಿತು.

    ಆಚಾರ್ಯರು ದಕ್ಷಿಣ ಮತ್ತು ಉತ್ತರ ಭಾರತದಲ್ಲೆಲ್ಲಾ ದಿಗ್ವಿಜಯ ಗೈದು ಶಿವಭಟ್ಟ, ಶೋಭನಭಟ್ಟ ಮೊದಲಾದ ಮಹಾಮೇಧಾವಿಗಳನ್ನು ಜಯಿಸಿ ನಿರುತ್ತರಗೊಳಿಸಿದರು. ಕೂಸಾಗಿರುವಾಗಲೇ ಬೇಯಿಸಿದ ಹುರುಳಿಯನ್ನು ತಿಂದು ಜೀರ್ಣ ಮಾಡಿಕೊಂಡರು. ಬಾಲ್ಯತನದಲ್ಲಿಯೇ ಎತ್ತಿನ ಬಾಲ ಹಿಡಿದುಕೊಂಡು ಕಾಡೆಲ್ಲ ಸುತ್ತಿದರು. ಹುಣಿಸೆಯ ಬೀಜಗಳನ್ನು ಸುವರ್ಣ ನಾಣ್ಯಗಳನ್ನಾಗಿ ಮಾಡಿ ತಂದೆಯ ಸಾಲ ತೀರಿಸಿದರು. ಉಡುತಡಿ ಎಂಬ ಗ್ರಾಮದಲ್ಲಿ ಬೇಸಿಗೆಯಲ್ಲಿ ನೀರಿಲ್ಲದೇ ಕಷ್ಟಪಡುವ ಜನರನ್ನು ಕಂಡು ಕರುಣೆಯಿಂದ ಆಚಾರ್ಯರು ಮೋಡವನ್ನು ತರಿಸಿ ಮಳೆಗರೆಸಿ ಕೆರೆ ತುಂಬುವಂತೆ ಮಾಡಿದರು. ಮತ್ತೊಮ್ಮೆ ಆಚಾರ್ಯರು ಕಡೂರು ಜಿಲ್ಲೆಯ ಕಳಸ ಎಂಬ ಊರಿನ ತುಂಗಾನದಿಯಲ್ಲಿ ಒಂದು ದೊಡ್ಡ ಬಂಡೆಯನ್ನು ಎತ್ತಿ ನಿರ್ದಿಷ್ಟ ಸ್ಥಳದಲ್ಲಿ ಅನಾಯಾಸವಾಗಿ ಇರಿಸಿದರು. ಹೀಗೆ ಎಷ್ಟೋ ಮಹಿಮೆಗಳನ್ನು ತೋರಿಸಿದರು.

    ಆಚಾರ್ಯರು ಭಕ್ತರಿಗೆ ಅನುಗ್ರಹ ಮಾಡುವುದಕ್ಕಾಗಿ ಶಾಲಿಗ್ರಾಮ ಶಿಲಾಮಯ ಸುಂದರ ಶ್ರೀಕೃಷ್ಣನ ಮೂರ್ತಿಯನ್ನು ಉಡುಪಿ ಕ್ಷೇತ್ರದಲ್ಲಿ ಪ್ರತಿಷ್ಠಿಸಿದರು ಹಾಗೂ ಉಡುಪಿಯಲ್ಲಿ ಎಂಟು ಜನರಿಗೆ ಪರಮಹಂಸ ಸಂನ್ಯಾಸ ದೀಕ್ಷೆಯನ್ನಿತ್ತು ತಮ್ಮ ತರುಮಾಯ ಶ್ರೀಕೃಷ್ಣನ ಪೂಜೆಯು ಅವರಿಂದ ಅನವರತ ನಡೆದು ಬರುವಂತೆ ಅನುಗ್ರಹಿಸಿದರು.
ಉಡುಪಿ ಅಷ್ಟಮಠಗಳು : ಪೇಜಾವರ, ಕಾಣಿಯೂರು, ಫಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ ಎಂಬುದಾಗಿ ವ್ಯವಹರಿಸಲ್ಪಡುತ್ತವೆ.

    ಶ್ರೀಕೃಷ್ಣನ ಪೂಜೆಗಾಗಿ ಅಷ್ಟಮಠಗಳನ್ನು ನಿರ್ಮಿಸಿದಂತೆ ಅಚಾರ್ಯರು ಶ್ರೀಪದ್ಮನಾಭತೀರ್ಥರು, ಶ್ರೀನರಹರಿತೀರ್ಥರು, ಶ್ರೀಮಾದವತೀರ್ಥರು ಮತ್ತು ಶ್ರೀಅಕ್ಷೋಭ್ಯತೀರ್ಥರುಗಳಿಗೆ ಅಶ್ರಮವನ್ನು ಕೊಟ್ಟು ಅನುಗ್ರಹಿಸಿದರು. "ನೀವು ಈ ಪರಂಪರೆಯನ್ನು ಬೆಳೆಸಬೇಕು" ಎಂದು ಆಶೀರ್ವದಿಸಿದರು. ಅನಂತರ, ಶ್ರೀಮದನಂತೇಶ್ವರ ದೇವಾಲಯದಲ್ಲೀ ಶಿಷ್ಯ ಪರಿವಾರಕ್ಕೆ ಪಾಠ ಹೇಳುತ್ತಿದ್ದಂತೆ, ಪಿಂಗಳ ನಾಮ ಸಂವತ್ಸರದ ಮಾಘ ಶುದ್ಧ ನವಮೀ ದಿವಸ ಅದೃಶ್ಯರಾಗಿ ಬದರಿಕಾಶ್ರಮಕ್ಕೆ ತೆರಳಿದರು. ಅಗ ದೇವತೆಗಳು ಹೂಮಳೆಗರೆದರು. ಕೆಲವು ಜನರ ಹೇಳಿಕೆಯಂತೆ ಶ್ರೀ ಮಧ್ವಾಚಾರ್ಯರು ಬದರಿಕಾಶ್ರಮದಿಂದ ದೊಡ್ಡಬದರಿಯಲ್ಲಿರುವ ಶ್ರೀವೇದವ್ಯಾಸ ದೇವರಲ್ಲಿಗೆ ವಾಯುದೇವರಂತೆ ಗುಡ್ಡದಿಂದ ಗುಡ್ಡಕ್ಕೆ ಉಡ್ಡಾಣ ಮಾಡುತ್ತ ಹೋದರೆಂತಲೂ ವದಂತಿ ಇದೆ. ಇಂದಿಗೂ ಅಚಾರ್ಯರು ಪಾಠ ಹೇಳುತ್ತ ಅದೃಶ್ಯರಾದ ಸ್ಥಳವನ್ನು ನೋಡಬಹುದಾಗಿದೆ.

ಇ೦ಥ ಜೀವೋತ್ತಮರಾದ ಶ್ರೀಮಧ್ವಾಚಾರ್ಯರ ಸಚ್ಛಾಸ್ತ್ರಗಳನ್ನು ಸೇವಿಸಿ, ಸಜ್ಜನರು ಸದ್ಗತಿಯನು ಹೊಂದುವರು ಎಂಬುದರಲ್ಲಿ ಲವಲೇಶವೂ ಸಂಶಯವಿಲ್ಲ.  ಶ್ರೀಮಧ್ವಮತದ ಸಾರ ಇಂತಿದೆ.

ಶ್ರೀಮನ್ಮಧ್ವವತೇ ಹರಿಃ ಪರತರಃ ಸತ್ಯಂ ಜಗತ್ತತ್ವತೋ|
ಭಿನ್ನಾಜೀವಗಣಾಃ ಹರೇರನುಚರಾಃ ನೀಚೋಚ್ಚಭಾವಂ ಗತಾಃ||
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚತತ್ಸಾಧನಮ್|
ಹ್ಯಕ್ಷಾದಿ ತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ|
|

ಬ್ರಹ್ಮಾಂತಾಃ ಗುರವಃ ಸಾಕ್ಷಾದಿಷ್ಟಂ ದೈವಂ ಶ್ರಿಯಃ ಪತಿಃ|
ಆಚಾರ್ಯಃ ಶ್ರೀಮದಾಚಾರ್ಯಃ ಸಂತು ಮೇ ಜನ್ಮಜನ್ಮನಿ||

Posted in: